ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ (Yellow Line) ಸಂಚರಿಸುವ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ಸಿಹಿ ಸುದ್ದಿ ನೀಡಿದೆ. ಈ ಮಾರ್ಗಕ್ಕೆ ನಾಳೆಯಿಂದ 8ನೇ ಮೆಟ್ರೋ ರೈಲು ಸೇರ್ಪಡೆಯಾಗುತ್ತಿದ್ದು, ಇದರಿಂದ ರೈಲುಗಳ ಸಂಚಾರದ ನಡುವಿನ ಸಮಯದ ಅಂತರ ಗಣನೀಯವಾಗಿ ಕಡಿಮೆ ಆಗಲಿದೆ.
ಬದಲಾದ ವೇಳಾಪಟ್ಟಿಯ ವಿವರ:
ಪ್ರಸ್ತುತ 7 ರೈಲುಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿರುವ ಹಳದಿ ಮಾರ್ಗಕ್ಕೆ 8ನೇ ರೈಲು ಸೇರ್ಪಡೆಗೊಳ್ಳುತ್ತಿದೆ. ಸೋಮವಾರದಿಂದ ಶನಿವಾರದವರೆಗೆ ಪೀಕ್ ಅವಧಿಯಲ್ಲಿ ರೈಲುಗಳ ನಡುವಿನ ಅಂತರ 10 ನಿಮಿಷಗಳಿಂದ 9 ನಿಮಿಷಕ್ಕೆ ಇಳಿಕೆಯಾಗಲಿದೆ. ನಾನ್ ಪೀಕ್ ಅವಧಿಯಲ್ಲಿ ರೈಲುಗಳಿಗಾಗಿ 18 ನಿಮಿಷ ಕಾಯಬೇಕಿತ್ತು, ಇನ್ಮುಂದೆ ಕೇವಲ 14 ನಿಮಿಷಕ್ಕೆ ರೈಲು ಸಂಚರಿಸಲಿದೆ. ಹಾಗೂ ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ದಿನದ ಮೊದಲ ರೈಲು ಮತ್ತು ಕೊನೆಯ ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ರೈಲಿನ ಸೇರ್ಪಡೆಯಿಂದ ಈ ಮಾರ್ಗದಲ್ಲಿ ದಟ್ಟಣೆ ಕಡಿಮೆಯಾಗಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
