ಬೆಂಗಳೂರು: ಟಿಕೆಟ್ ಮಾರಾಟದ ಹೊರತಾದ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಹೆಜ್ಜೆಯಿಟ್ಟಿದೆ. ಹೊರವರ್ತುಲ ರಸ್ತೆಯ (ORR) ಐಟಿ ಕಾರಿಡಾರ್‌ನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ‘ಬೆಳ್ಳಂದೂರು ಮೆಟ್ರೋ ನಿಲ್ದಾಣ’ದ ನಾಮಕರಣ ಹಾಗೂ ನಿರ್ವಹಣೆ ಹಕ್ಕುಗಳಿಗಾಗಿ ಪ್ರತಿಷ್ಠಿತ ‘ಪ್ರೆಸ್ಟೀಜ್ ಗ್ರೂಪ್’ (Prestige Group) ಜೊತೆಗೆ ಬರೋಬ್ಬರಿ ₹90 ಕೋಟಿ ಮೌಲ್ಯದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದೆ.
ಈ 30 ವರ್ಷಗಳ ದೀರ್ಘಾವಧಿಯ ಒಪ್ಪಂದದ ಅನ್ವಯ, ಈ ನಿಲ್ದಾಣವನ್ನು ಅಧಿಕೃತವಾಗಿ ‘ಪ್ರೆಸ್ಟೀಜ್ ಬೆಳ್ಳಂದೂರು ಮೆಟ್ರೋ ನಿಲ್ದಾಣ’ ಎಂದು ಮರುನಾಮಕರಣ ಮಾಡಲಾಗುತ್ತಿದೆ.
ಒಪ್ಪಂದದ ಪ್ರಮುಖ ಹೈಲೈಟ್ಸ್:
ನಿಲ್ದಾಣದ ನಾಮಕರಣ ಮತ್ತು ಇತರ ಮೂಲಸೌಕರ್ಯ ಹಕ್ಕುಗಳಿಗಾಗಿ ಪ್ರೆಸ್ಟೀಜ್ ಸಂಸ್ಥೆಯು ಬಿಎಂಆರ್‌ಸಿಎಲ್‌ಗೆ ₹80 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಿದೆ.
ಮೆಟ್ರೋ ನಿಲ್ದಾಣದಿಂದ ನೇರವಾಗಿ ಪ್ರೆಸ್ಟೀಜ್ ಸಂಸ್ಥೆಯ ಆವರಣಕ್ಕೆ ಸಂಪರ್ಕ ಕಲ್ಪಿಸುವ ವಿಶೇಷ ಪಾದಚಾರಿ ಮೇಲ್ಸೇತುವೆ (Skywalk) ನಿರ್ಮಾಣಕ್ಕಾಗಿ ₹10 ಕೋಟಿ ರೂಪಾಯಿಗಳ ಹೆಚ್ಚುವರಿ ಹೂಡಿಕೆ ಮಾಡಲಾಗುತ್ತಿದೆ.
ಈ ಒಪ್ಪಂದದ ಪ್ರತಿಫಲವಾಗಿ ಪ್ರೆಸ್ಟೀಜ್ ಗ್ರೂಪ್‌ಗೆ ನಿಲ್ದಾಣದ ಆವರಣದಲ್ಲಿ 3,000 ಚದರ ಅಡಿ ವಾಣಿಜ್ಯ ಮಳಿಗೆಗಳ (Commercial space) ಜಾಗ ಹಾಗೂ ಒಳಾಂಗಣದಲ್ಲಿ 1,000 ಚದರ ಅಡಿ ಜಾಹೀರಾತು ಪ್ರದರ್ಶನದ ಹಕ್ಕುಗಳು ಲಭ್ಯವಾಗಲಿವೆ.
ಇಂಟೆಲ್ ಒಪ್ಪಂದಕ್ಕೆ ಬ್ರೇಕ್, ಪ್ರೆಸ್ಟೀಜ್‌ಗೆ ಮಣೆ!
ಬೆಳ್ಳಂದೂರು ಮೆಟ್ರೋ ನಿಲ್ದಾಣದ ಅಭಿವೃದ್ಧಿಗಾಗಿ 2018ರಲ್ಲೇ ಜಾಗತಿಕ ತಂತ್ರಜ್ಞಾನ ದೈತ್ಯ ‘ಇಂಟೆಲ್’ (Intel) ಸಂಸ್ಥೆಯೊಂದಿಗೆ BMRCL ₹100 ಕೋಟಿಗಳ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆ ಪ್ರಕ್ರಿಯೆ ಕಾರ್ಯಗತಗೊಳ್ಳದೆ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ, ಇದೀಗ ಪ್ರೆಸ್ಟೀಜ್ ಗ್ರೂಪ್ ಜೊತೆಗಿನ ಒಪ್ಪಂದದ ಮೂಲಕ ನಿಲ್ದಾಣದ ಅಭಿವೃದ್ಧಿಗೆ ಮರುಜೀವ ನೀಡಲಾಗಿದೆ. ಮೆಟ್ರೋ ನಿರ್ಮಾಣದ ₹30,000 ಕೋಟಿಗೂ ಅಧಿಕ ಆರ್ಥಿಕ ಹೊರೆಯನ್ನು ಸರಿದೂಗಿಸಲು ಇಂತಹ ‘ನವೀನ ಹಣಕಾಸು ಮಾದರಿ’ಗಳನ್ನು (Innovative Financing) ನಿಗಮ ಅಳವಡಿಸಿಕೊಳ್ಳುತ್ತಿದೆ.
https://x.com/OfficialBMRCL/status/2025218729039339639
ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ, ಮಾಲೀಕತ್ವ BMRCL ಬಳಿಯೇ!
ನಮ್ಮ ಮೆಟ್ರೋದಲ್ಲಿ ಪ್ರತಿದಿನ 7 ಲಕ್ಷಕ್ಕೂ ಅಧಿಕ ಜನರು ಸಂಚರಿಸುತ್ತಿದ್ದು, ಐಟಿ ಕಾರಿಡಾರ್‌ನಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂದೂರು ನಿಲ್ದಾಣದ ಒಳಾಂಗಣ ವಿನ್ಯಾಸವನ್ನು ‘ಹಸಿರು ಕಟ್ಟಡ’ (IGBC) ಮಾನದಂಡಗಳಿಗೆ ಅನುಗುಣವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಪ್ರೆಸ್ಟೀಜ್ ಗ್ರೂಪ್ ವಹಿಸಿಕೊಂಡಿದೆ.
ನಿಲ್ದಾಣದ ದೈನಂದಿನ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಪ್ರೆಸ್ಟೀಜ್ ಸಂಸ್ಥೆ ಒದಗಿಸಿದರೂ, ನಿಲ್ದಾಣದ ಸಂಪೂರ್ಣ ಒಡೆತನ ಹಾಗೂ ಕಾರ್ಯಾಚರಣೆಯ ನಿಯಂತ್ರಣ ಬಿಎಂಆರ್‌ಸಿಎಲ್ ಸುಪರ್ದಿಯಲ್ಲೇ ಮುಂದುವರಿಯಲಿದೆ.
