S Shorts

​ಬೆಂಗಳೂರು Metro ಪ್ರಯಾಣಿಕರಿಗೆ ಬಿಗ್ ರಿಲೀಫ್: ಟಿಕೆಟ್ ದರ ಏರಿಕೆ ತಾತ್ಕಾಲಿಕ ಸ್ಥಗಿತ! ಜನಾಕ್ರೋಶಕ್ಕೆ ಮಣಿದ BMRCL

​ಬೆಂಗಳೂರು Metro ಪ್ರಯಾಣಿಕರಿಗೆ ಬಿಗ್ ರಿಲೀಫ್: ಟಿಕೆಟ್ ದರ ಏರಿಕೆ ತಾತ್ಕಾಲಿಕ ಸ್ಥಗಿತ! ಜನಾಕ್ರೋಶಕ್ಕೆ ಮಣಿದ BMRCL
Author: Sagaradventure
Posted By: Sagaradventure
Updated: Feb 8, 2026 | 9:06 PM

ಬೆಂಗಳೂರು: ತೀವ್ರ ಜನಾಕ್ರೋಶ ಮತ್ತು ಕೇಂದ್ರ ಸರ್ಕಾರದ ಮಧ್ಯಪ್ರವೇಶದ ನಂತರ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕೊನೆಗೂ ಟಿಕೆಟ್ ದರ ಏರಿಕೆಯ ನಿರ್ಧಾರವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದೆ. ಇದರಿಂದಾಗಿ ಸೋಮವಾರದಿಂದಲೇ ಜೇಬಿಗೆ ಕತ್ತರಿ ಬೀಳುವ ಆತಂಕದಲ್ಲಿದ್ದ ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

​ಕೇವಲ 10 ತಿಂಗಳ ಹಿಂದಷ್ಟೇ ದರ ಪರಿಷ್ಕರಣೆ ಮಾಡಿ ಜನಸಾಮಾನ್ಯರಿಗೆ ಹೊರೆ ನೀಡಿದ್ದ ಬಿಎಂಆರ್‌ಸಿಎಲ್, ಇದೀಗ ಮತ್ತೆ ಶೇ. 5 ರಷ್ಟು ದರ ಏರಿಕೆಗೆ ಮುಂದಾಗಿತ್ತು. ದರ ನಿಗದಿ ಸಮಿತಿಯ ಶಿಫಾರಸ್ಸಿಗೆ ರಾಜ್ಯ ಸರ್ಕಾರದ ಒಪ್ಪಿಗೆಯೂ ಸಿಕ್ಕಿದ್ದು, ನಾಳೆಯಿಂದಲೇ ಹೊಸ ದರ ಜಾರಿಗೆ ಬರಬೇಕಿತ್ತು. ಆದರೆ, ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದಕ್ಕೆ ಬ್ರೇಕ್ ಹಾಕಿದ್ದು, ದರ ಹೆಚ್ಚಳ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

​ಸಂಸದ ತೇಜಸ್ವಿ ಸೂರ್ಯ ಮನವಿ ಮತ್ತು ಕೇಂದ್ರದ ಸೂಚನೆ
ಮೆಟ್ರೋ ದರ ಏರಿಕೆ ವಿಚಾರವು ರಾಜಕೀಯ ವಲಯದಲ್ಲಿ ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಈ ನಡುವೆ ಶನಿವಾರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಎಂ.ಎಲ್. ಖಟ್ಟರ್ ಅವರನ್ನು ಭೇಟಿಯಾದ ಸಂಸದ ತೇಜಸ್ವಿ ಸೂರ್ಯ, ವಾರ್ಷಿಕ ದರ ಏರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ದರ ಪರಿಷ್ಕರಿಸಲು ಹೊಸ ಸಮಿತಿ ರಚಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಪ್ರಸ್ತಾವಿತ ಹೆಚ್ಚಳವನ್ನು ತಡೆಹಿಡಿಯುವಂತೆ ಬಿಎಂಆರ್‌ಸಿಎಲ್‌ಗೆ ಆದೇಶಿಸಿದ್ದರು.

ಬಿಎಂಆರ್‌ಸಿಎಲ್ ಸ್ಪಷ್ಟನೆ ಏನು?

ಕೇಂದ್ರದ ಸೂಚನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಎಂಆರ್‌ಸಿಎಲ್, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನಿಗಮ, “ಫೆಬ್ರವರಿ 5ರಂದು ಪ್ರಕಟಿಸಿದ್ದ ದರ ಏರಿಕೆ ಆದೇಶವನ್ನು ಮುಂದಿನ ಸೂಚನೆಯವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಿರ್ದೇಶಕರ ಮಂಡಳಿಯ ಪರಿಶೀಲನೆಯ ನಂತರ ಮುಂದಿನ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು. ಬೆಂಗಳೂರು ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಸುರಕ್ಷಿತ ಸೇವೆ ನೀಡಲು ನಾವು ಬದ್ಧ” ಎಂದು ಸ್ಪಷ್ಟಪಡಿಸಿದೆ.