ಬೆಂಗಳೂರು: ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್‌ವರ್ಕ್ ನಿರ್ವಹಿಸುತ್ತಿರುವ ನೆಫ್ರೋಪ್ಲಸ್ 2026ರ ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕ ಹಾಗೂ ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದ ಅತ್ಯುತ್ತಮ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ. ಕಂಪನಿಯು ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬರೋಬ್ಬರಿ 585.2 ಕೋಟಿ ರೂ. ಆದಾಯ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 23.6ರಷ್ಟು ಭಾರಿ ಪ್ರಗತಿ ಸಾಧಿಸಿದೆ. ಇದೇ ಅವಧಿಯಲ್ಲಿ ಕಾರ್ಯಾಚರಣೆ ಲಾಭ ಶೇ. 15.3ರಷ್ಟು ಏರಿಕೆ ಕಂಡು 134.4 ಕೋಟಿ ರೂ.ಗೆ ತಲುಪಿದೆ ಹಾಗೂ ನಿವ್ವಳ ಲಾಭ ಶೇ. 34.7ರಷ್ಟು ಗಣನೀಯ ಏರಿಕೆ ಕಂಡು 76.1 ಕೋಟಿ ರೂ. ಮುಟ್ಟಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ಕಂಪನಿಯು ಒಟ್ಟು 21.01 ಲಕ್ಷ ಡಯಾಲಿಸಿಸ್ ಚಿಕಿತ್ಸೆಗಳನ್ನು ಒದಗಿಸಿದ್ದು, ಇದರಲ್ಲಿ ಶೇ. 12.6ರಷ್ಟು ವಾರ್ಷಿಕ ಏರಿಕೆ ದಾಖಲಾಗಿದೆ. ಪ್ರತಿ ಚಿಕಿತ್ಸೆಯಿಂದ ಬರುವ ಆದಾಯವು ಶೇ. 9.7ರಷ್ಟು ಏರಿಕೆಯಾಗಿ 2,785 ರೂ.ಗೆ ತಲುಪಿದೆ. ತನ್ನ ಸೇವಾ ಜಾಲವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಿರುವ ನೆಫ್ರೋಪ್ಲಸ್, ಕಜಕಿಸ್ತಾನದ ಅಲ್ಮಾಟಿಯಲ್ಲಿ 34 ಯಂತ್ರಗಳಿರುವ ಎರಡು ಕ್ಲಿನಿಕ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಆ ದೇಶಕ್ಕೂ ಯಶಸ್ವಿಯಾಗಿ ಕಾಲಿಟ್ಟಿದೆ.
ಕಳೆದ ಆರು ತಿಂಗಳಲ್ಲಿ ಬಂಡವಾಳ ವೆಚ್ಚಕ್ಕಾಗಿ 102 ಕೋಟಿ ರೂ. ಹೂಡಿಕೆ ಮಾಡಿರುವ ಕಂಪನಿ, ಭಾರತದಲ್ಲಿ 40 ಮತ್ತು ಫಿಲಿಪೈನ್ಸ್‌ನಲ್ಲಿ 11 ಹೊಸ ಕ್ಲಿನಿಕ್‌ಗಳನ್ನು ಆರಂಭಿಸಿದೆ. ಸೌದಿ ಅರೇಬಿಯಾದಲ್ಲಿ ‘ಹೋಮ್ ಡಯಾಲಿಸಿಸ್’ ಸೇವೆ ಪ್ರಾರಂಭವಾಗಿದ್ದು, ಅಲ್ಲಿನ ಆರೋಗ್ಯ ಸಚಿವಾಲಯದ ಬಹುದೊಡ್ಡ ಟೆಂಡರ್ ಪ್ರಕ್ರಿಯೆಯಲ್ಲೂ ನೆಫ್ರೋಪ್ಲಸ್ ಅರ್ಹತೆ ಪಡೆದುಕೊಂಡಿದೆ. ಪ್ರಸ್ತುತ ವಿಶ್ವದ 6 ದೇಶಗಳಲ್ಲಿ ಒಟ್ಟು 570 ಕ್ಲಿನಿಕ್‌ಗಳನ್ನು ಹೊಂದಿದ್ದು, ಕಂಪನಿಯ ಒಟ್ಟು ಆದಾಯದಲ್ಲಿ ಸರಿಸುಮಾರು ಶೇ. 47ರಷ್ಟು ಪಾಲು ಅಂತಾರಾಷ್ಟ್ರೀಯ ವಹಿವಾಟಿನಿಂದಲೇ ಬರುತ್ತಿದೆ.
ಹಣಕಾಸು ಫಲಿತಾಂಶಗಳ ಕುರಿತು ಮಾತನಾಡಿದ ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ವಿಕ್ರಮ್ ವುಪ್ಪಲ, ವಿಶ್ವಾದ್ಯಂತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗುತ್ತಿರುವ ಕಾರಣ ಡಯಾಲಿಸಿಸ್ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ನಾವು ಕಜಕಿಸ್ತಾನ ಪ್ರವೇಶಿಸಿರುವುದು ಖುಷಿ ತಂದಿದೆ ಎಂದಿದ್ದಾರೆ.
ಅಂತರಾಷ್ಟ್ರೀಯ ಬೇಡಿಕೆ ಪೂರೈಸಲು ಮತ್ತು ನುರಿತ ಸಿಬ್ಬಂದಿಯನ್ನು ರೂಪಿಸಲು ‘ನೆಫ್ರೋಪ್ಲಸ್ ಇಂಟರ್ನ್ಯಾಷನಲ್ ಡಯಾಲಿಸಿಸ್ ಅಕಾಡೆಮಿ’ ಸ್ಥಾಪಿಸಲಾಗಿದ್ದು, ಇಲ್ಲಿ ನರ್ಸ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ಭಾರತ, ನೇಪಾಳ, ಫಿಲಿಪೈನ್ಸ್, ಉಜ್ಬೇಕಿಸ್ತಾನ್, ಸೌದಿ ಅರೇಬಿಯಾ ಮತ್ತು ಕಜಕಿಸ್ತಾನದಲ್ಲಿ ತನ್ನ ಸೇವೆ ಒದಗಿಸುತ್ತಿದೆ.
