ಬೆಂಗಳೂರು: ರಾಜ್ಯದಲ್ಲಿ ಜಾರಿಗೆ ಬಂದಿರುವ ಹೊಸ ಅಬಕಾರಿ ನೀತಿಯು (New Excise Policy) ಮದ್ಯಪ್ರಿಯರಿಗೆ ಭರ್ಜರಿ ಕಿಕ್ ನೀಡಿದ್ದು, ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ನೇತೃತ್ವದ ಸರ್ಕಾರಕ್ಕೆ ದಾಖಲೆ ಮಟ್ಟದ ಆದಾಯ ತಂದುಕೊಟ್ಟಿದೆ. ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ (Alcohol Percentage Base) ಸುಂಕ ವಿಧಿಸುವ ಹೊಸ ನೀತಿಯಿಂದಾಗಿ ಬಿಯರ್ ಬೆಲೆ ಇಳಿಕೆಯಾಗಿದ್ದು, ಮಾರಾಟದಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ.
ಹೊಸ ನೀತಿ ಜಾರಿಯಾದ ಕೇವಲ ಒಂದು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 403.10 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ (Beer Sales). ಕಳೆದ ವರ್ಷ ಇದೇ ಅವಧಿಯಲ್ಲಿ 252 ಲಕ್ಷ ಲೀಟರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 150.23 ಲಕ್ಷ ಲೀಟರ್ ಹೆಚ್ಚುವರಿ ಬಿಯರ್ ಸೇಲ್ ಆಗಿದೆ.
IML ಬಿಟ್ಟು Beer ಕಡೆ ಮುಖ ಮಾಡಿದ ಮದ್ಯಪ್ರಿಯರು: 2023 ರಲ್ಲಿ 150 ರೂಪಾಯಿ ಇದ್ದ ಬಿಯರ್ ಬೆಲೆ, ಹಿಂದಿನ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಅವಧಿಯಲ್ಲಿ 3 ವರ್ಷಗಳಲ್ಲಿ 6 ಬಾರಿ ಹೆಚ್ಚಳವಾಗಿ 270 ರಿಂದ 300 ರೂಪಾಯಿಗೆ ತಲುಪಿತ್ತು. ಇದರಿಂದ ಬೇಸತ್ತಿದ್ದ ಮದ್ಯಪ್ರಿಯರು ಐಎಂಎಲ್ (IML – Indian Made Foreign Liquor) ಕಡೆ ಮುಖ ಮಾಡಿದ್ದರು. ಆದರೆ ಪ್ರಸ್ತುತ ಹೊಸ ನೀತಿಯಿಂದಾಗಿ ಬೆಲೆ ಇಳಿಕೆಯಾಗಿದ್ದು, ಮದ್ಯಪ್ರಿಯರು ಮತ್ತೆ ಐಎಂಎಲ್ ಬಿಟ್ಟು ಬಿಯರ್ ಮೊರೆ ಹೋಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಬಿಯರ್ ಗೆ ಭಾರಿ ಡಿಮ್ಯಾಂಡ್ (High Demand) ಸೃಷ್ಟಿಯಾಗಿದೆ.
