S Shorts

ವಾಹನ ಸವಾರರ ಗಮನಕ್ಕೆ: ಏ.13 ರಿಂದ 4 ದಿನಗಳ ಕಾಲ ಬೆಂಗಳೂರಿನ ಪೀಣ್ಯ Flyover ಬಂದ್; ಇಲ್ಲಿದೆ ಪರ್ಯಾಯ ಮಾರ್ಗ!

ವಾಹನ ಸವಾರರ ಗಮನಕ್ಕೆ: ಏ.13 ರಿಂದ 4 ದಿನಗಳ ಕಾಲ ಬೆಂಗಳೂರಿನ ಪೀಣ್ಯ Flyover ಬಂದ್; ಇಲ್ಲಿದೆ ಪರ್ಯಾಯ ಮಾರ್ಗ!
Author: Sagaradventure
Posted By: Sagaradventure
Updated: Apr 11, 2026 | 8:07 AM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ಸಂಪರ್ಕ ಸೇತುವೆಯಾಗಿರುವ ರಾಷ್ಟ್ರೀಯ ಹೆದ್ದಾರಿ-4ರ ‘ಪೀಣ್ಯ ಎಲಿವೇಟೆಡ್ ಫ್ಲೈಓವರ್’ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲಿನ ವಾಹನ ಸಂಚಾರವನ್ನು ಏಪ್ರಿಲ್ 13 ರಿಂದ ಏಪ್ರಿಲ್ 17 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕಡ್ಡಾಯವಾಗಿ ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

​ಸಂಚಾರ ಬಂದ್ ಆಗಲು ಕಾರಣವೇನು?

ಪೀಣ್ಯ ಫ್ಲೈಓವರ್‌ನಲ್ಲಿ ಅಳವಡಿಸಲಾಗಿದ್ದ ಕೇಬಲ್‌ಗಳ ದುರಸ್ತಿ ಕಾಮಗಾರಿ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮೇಲ್ವೇತುವೆಯ ಸಮಗ್ರತೆ ಮತ್ತು ಭಾರ ಹೊರುವ ಸಾಮರ್ಥ್ಯವನ್ನು ಪರೀಕ್ಷಿಸಲು ಅಂತಿಮ ಹಂತದ ‘ಲೋಡ್ ಟೆಸ್ಟಿಂಗ್’ (Load Testing) ನಡೆಸಬೇಕಿರುವ ಕಾರಣ, ವಾಹನ ಸಂಚಾರವನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೋರಿಕೆ ಸಲ್ಲಿಸಿತ್ತು. ಇದರನ್ವಯ ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್‌ನಿಂದ (Upper ramp) ಎಸ್.ಆರ್.ಎಸ್ ಡೌನ್ ರಾಂಪ್‌ವರೆಗೆ (Down ramp) ಫ್ಲೈಓವರ್‌ನ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

​ಸಂಚಾರ ನಿರ್ಬಂಧದ ಅವಧಿ:

​ಪ್ರಾರಂಭ: ಏಪ್ರಿಲ್ 13, 2026ರ ಬೆಳಿಗ್ಗೆ 05:00 ಗಂಟೆಗೆ.
​ಅಂತ್ಯ: ಏಪ್ರಿಲ್ 17, 2026ರ ಬೆಳಿಗ್ಗೆ 11:00 ಗಂಟೆಗೆ.

​ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ವಿವರ:

​ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವವರಿಗೆ: ವಾಹನ ಸವಾರರು ಕೆನ್ನಮೆಟಲ್ ವಿಡಿಯಾ ಬಳಿ ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಸಾಗಿ, 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮತ್ತು ಎಸ್.ಆರ್.ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.

​ಬೆಂಗಳೂರಿನಿಂದ (CMTI) ನೆಲಮಂಗಲ ಕಡೆಗೆ ಹೋಗುವವರಿಗೆ: ವಾಹನ ಸವಾರರು ಫ್ಲೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಸಾಗಿ, ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಹಾಗೂ ಪಾರ್ಲೆ-ಜಿ ಟೋಲ್ ಮೂಲಕ ನೆಲಮಂಗಲದ ಕಡೆಗೆ ಸುಲಭವಾಗಿ ಸಂಚರಿಸಬಹುದು.