S Shorts

Hosapete ಬಳಿ ಭೀಕರ ಸರಣಿ ಅಪಘಾತ: ಕಾರಿನ ಮೇಲೆ ಉರುಳಿದ ಬೆಳ್ಳುಳ್ಳಿ ಲಾರಿ, ನಾಲ್ವರ ಸಾವು ಶಂಕೆ!

Hosapete ಬಳಿ ಭೀಕರ ಸರಣಿ ಅಪಘಾತ: ಕಾರಿನ ಮೇಲೆ ಉರುಳಿದ ಬೆಳ್ಳುಳ್ಳಿ ಲಾರಿ, ನಾಲ್ವರ ಸಾವು ಶಂಕೆ!
Author: Sagaradventure
Posted By: Sagaradventure
Updated: Apr 19, 2026 | 11:46 AM

ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಡಾಣಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಸರಣಿ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಬೆಳ್ಳುಳ್ಳಿ ತುಂಬಿದ್ದ ಲಾರಿಯೊಂದು ಬೈಕ್, ಕಾರು ಹಾಗೂ ಕೆಎಸ್ಆರ್‌ಟಿಸಿ ಬಸ್‌ಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿಯು ಕಾರಿನ ಮೇಲೆ ಪಲ್ಟಿಯಾಗಿದ್ದು, ಈ ಘೋರ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳದಲ್ಲಿ ಭೀಕರ ದೃಶ್ಯ ನಿರ್ಮಾಣವಾಗಿತ್ತು.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳ್ಳುಳ್ಳಿ ತುಂಬಿದ್ದ ಲಾರಿಯು ಮರಿಯಮ್ಮನಹಳ್ಳಿ ಮಾರ್ಗವಾಗಿ ಹೊಸಪೇಟೆ ಮೂಲಕ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಲಾರಿ ಚಾಲಕ ನಿಗದಿತ ಸಮಯಕ್ಕಿಂತ ತಡವಾಗಿದ್ದ ಕಾರಣ, ಸಮಯವನ್ನು ಸರಿದೂಗಿಸಲು ಅತಿ ವೇಗವಾಗಿ ಲಾರಿಯನ್ನು ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ಬಿಎಂಎಂ ಫ್ಯಾಕ್ಟರಿ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮೊದಲು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಗಾಬರಿಗೊಂಡ ಚಾಲಕ ಅಲ್ಲಿಂದ ತಪ್ಪಿಸಿಕೊಳ್ಳಲು ಹೋಗಿ ಎದುರಿಗೆ ಬಂದ ಕಾರು ಮತ್ತು ಕೆಎಸ್ಆರ್‌ಟಿಸಿ ಬಸ್‌ಗೆ ಲಾರಿಯನ್ನು ಗುದ್ದಿಸಿದ್ದಾನೆ. ಅಂತಿಮವಾಗಿ ಬಸ್‌ಗೆ ಅಪ್ಪಳಿಸಿದ ರಭಸಕ್ಕೆ ಲಾರಿಯು ಪಕ್ಕದಲ್ಲಿದ್ದ ಕಾರಿನ ಮೇಲೆಯೇ ಉರುಳಿ ಬಿದ್ದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮರಿಯಮ್ಮನಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಭೀಕರ ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಕ್ರೇನ್ ಬಳಸಿ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.