ದಾವಣಗೆರೆ: ಮಠದಲ್ಲಿದ್ದ 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ (POCSO) ಪ್ರಕರಣ ಎದುರಿಸುತ್ತಿರುವ ವಚನಾನಂದ ಸ್ವಾಮೀಜಿ ಸಲ್ಲಿಸಿರುವ ‘ರೆಗ್ಯುಲರ್ ಬೇಲ್’ (ಸಾಮಾನ್ಯ ಜಾಮೀನು) ಅರ್ಜಿಯ ವಿಚಾರಣೆ ಇಂದು ದಾವಣಗೆರೆಯ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಈ ವಿಚಾರಣೆ ನಿಗದಿಯಾಗಿದೆ. ಸ್ವಾಮೀಜಿಯ ಜಾಮೀನು ಅರ್ಜಿಗೆ ಪ್ರತಿಯಾಗಿ ಸರ್ಕಾರಿ ಅಭಿಯೋಜಕರು ಹಾಗೂ ಸಂತ್ರಸ್ತ ಬಾಲಕನ ತಾಯಿ ಪ್ರತ್ಯೇಕವಾಗಿ ತಕರಾರು ಅರ್ಜಿಗಳನ್ನು ಸಲ್ಲಿಸಿರುವುದರಿಂದ ಇಂದಿನ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.
ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದ ಹೈಕೋರ್ಟ್
ಈ ಪ್ರಕರಣ ಅಧಿಕೃತವಾಗಿ ದಾಖಲಾಗುವ ಮುನ್ನವೇ ವಚನಾನಂದ ಸ್ವಾಮೀಜಿಯು ಮುನ್ನೆಚ್ಚರಿಕಾ ಕ್ರಮವಾಗಿ ನಿರೀಕ್ಷಣಾ ಜಾಮೀನು (Anticipatory Bail) ಪಡೆದುಕೊಂಡಿದ್ದರು. ಇದನ್ನು ತೀವ್ರವಾಗಿ ಪ್ರಶ್ನಿಸಿ ಮತ್ತು ಆ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾಯಿಯ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್, ಸ್ವಾಮೀಜಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಅಲ್ಲದೆ, ಕೆಳ ಹಂತದ ನ್ಯಾಯಾಲಯದಲ್ಲಿ ರೆಗ್ಯುಲರ್ ಬೇಲ್ ಪಡೆಯಲು 3 ವಾರಗಳ ಕಾಲಾವಕಾಶವನ್ನು ನೀಡಿತ್ತು.
410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸರು, ಈಗಾಗಲೇ ವಚನಾನಂದ ಸ್ವಾಮೀಜಿ ವಿರುದ್ಧ ಬರೋಬ್ಬರಿ 410 ಪುಟಗಳ ಸುದೀರ್ಘ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇಂದು ನಡೆಯಲಿರುವ ರೆಗ್ಯುಲರ್ ಬೇಲ್ ವಿಚಾರಣೆಯ ಬಳಿಕ ನ್ಯಾಯಾಲಯವು ಜಾಮೀನು ನೀಡುತ್ತದೆಯೋ ಅಥವಾ ವಜಾಗೊಳಿಸುತ್ತದೆಯೋ ಎಂಬುದರ ಮೇಲೆ ಪ್ರಕರಣದ ಮುಂದಿನ ಹಾದಿ ನಿರ್ಧಾರವಾಗಲಿದೆ.
