S Shorts

Politics | ರಾಜ್ಯದಲ್ಲಿ ಸಿದ್ದರಾಮಯ್ಯರದ್ದು ‘ತುಘಲಕ್ ದರ್ಬಾರ್’: ಬಿ.ಎಸ್. ಯಡಿಯೂರಪ್ಪ

Politics | ರಾಜ್ಯದಲ್ಲಿ ಸಿದ್ದರಾಮಯ್ಯರದ್ದು ‘ತುಘಲಕ್ ದರ್ಬಾರ್’:  ಬಿ.ಎಸ್. ಯಡಿಯೂರಪ್ಪ
Author: Meghana Gowda
Posted By: Meghana Gowda
Updated: Mar 31, 2026 | 11:54 AM

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಹಿತ ಮರೆತು ‘ತುಘಲಕ್ ದರ್ಬಾರ್’ ನಡೆಸುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B S Yediyurappa) ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರದ ಅಖಾಡಕ್ಕೆ ಯಡಿಯೂರಪ್ಪ:

ನಾನು ಇವತ್ತು ಮತ್ತು ನಾಳೆ ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದೇನೆ. ಏಪ್ರಿಲ್ 5 ಮತ್ತು 6 ರಂದು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಮಾಡಲಿದ್ದೇನೆ. ಕಾಂಗ್ರೆಸ್‌ಗೆ ಈಗಾಗಲೇ ಅಜೀರ್ಣವಾಗುವಷ್ಟು ಬಹುಮತವಿದೆ. ಮತ್ತೊಮ್ಮೆ ಗೆದ್ದರೆ ಅಧಿಕಾರದ ಮದದಿಂದ ಭ್ರಷ್ಟಾಚಾರ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಬಾಗಲಕೋಟೆಯಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಯಾರೇ ಬಂದರೂ ಪ್ರಚಾರ ನಡೆಸಲು ಅವಕಾಶವಿದೆ. ಅವರು ಪ್ರಚಾರಕ್ಕೆ ಬರಲಿ, ನಾನು ಸ್ವಾಗತಿಸುತ್ತೇನೆ” ಎಂದು ಹೇಳುವ ಮೂಲಕ ಗ್ರೀನ್ ಸಿಗ್ನಲ್ ನೀಡಿದ್ದಾರೆ.

 ಹಿಂದಿ ಭಾಷಾ ವಿವಾದಕ್ಕೆ ಪ್ರತಿಕ್ರಿಯೆ:

ರಾಜ್ಯದಲ್ಲಿ ಹಿಂದಿ ಭಾಷೆ ಕಡ್ಡಾಯವಲ್ಲ ಎಂಬ ಸರ್ಕಾರದ ತೀರ್ಮಾನವನ್ನು ಖಂಡಿಸಿದ ಅವರು,  ಹಿಂದಿ ಕಲಿಯುವುದರಿಂದ ಕನ್ನಡ ಭಾಷೆಗೆ ಯಾವುದೇ ಆಘಾತವಾಗುವುದಿಲ್ಲ. ದೇಶದ ಉದ್ದಗಲಕ್ಕೆ ಸಂವಹನ ನಡೆಸಲು ಹಿಂದಿ ಅಗತ್ಯವಿದೆ. ಹಿಂದಿ ಕಲಿಯುವುದನ್ನು ತಪ್ಪು ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ಭಾಷೆಯ ವಿಚಾರದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಕನ್ನಡಿಗರಲ್ಲಿ ವಿನಂತಿಸಿಕೊಂಡರು.

ಇಡೀ ಸರ್ಕಾರವೇ ಉಪಚುನಾವಣೆ ಪ್ರಚಾರದಲ್ಲಿ ಮುಳುಗಿದೆ. ಸ್ವತಃ ಸಿಎಂ ಅವರೇ ನಾಲ್ಕೈದು ದಿನ ಅಲ್ಲಿ ಬೀಡುಬಿಟ್ಟಿರುವುದನ್ನು ನೋಡಿದರೆ ಅವರಿಗೆ ಸೋಲಿನ ಭಯ ಕಾಡುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.