S Shorts

ರಾಯಚೂರಿನಲ್ಲಿ ಡಿಜೆ ಸೌಂಡ್ ಅವಾಂತರ: ಪೊಲೀಸ್ ವೈಫಲ್ಯದ ವಿರುದ್ಧ ಗರಂ ಆದ ಡಿಸಿ ಪೂವಿತಾ, ಎಸ್‌ಪಿಗೆ ಪತ್ರ!

ರಾಯಚೂರಿನಲ್ಲಿ ಡಿಜೆ ಸೌಂಡ್ ಅವಾಂತರ: ಪೊಲೀಸ್ ವೈಫಲ್ಯದ ವಿರುದ್ಧ ಗರಂ ಆದ ಡಿಸಿ ಪೂವಿತಾ, ಎಸ್‌ಪಿಗೆ ಪತ್ರ!
Author: Sagaradventure
Posted By: Sagaradventure
Updated: Sep 20, 2026 | 2:56 PM

ರಾಯಚೂರಿನಲ್ಲಿ ಡಿಜೆ ಸೌಂಡ್ ಅಬ್ಬರಕ್ಕೆ ಮಗಳು ಅಸ್ವಸ್ಥಗೊಂಡಿದ್ದಾಳೆ ಎಂದು ಆರೋಪಿಸಿ ತಂದೆಯೊಬ್ಬರು ಡಿಸಿ ನಿವಾಸದ ಮುಂದೆ ಧರಣಿ ನಡೆಸಿದ ಬೆನ್ನಲ್ಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಸೆಪ್ಟೆಂಬರ್ 18 ರಂದು ವಲ್ಲಭ್ ಎಂಬಾತ ತನ್ನ ಮಗಳ ಆರೋಗ್ಯ ಹದಗೆಟ್ಟಿದ್ದಕ್ಕೆ ನ್ಯಾಯ ಕೇಳಿ ಜಿಲ್ಲಾಧಿಕಾರಿಗಳ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ವಲ್ಲಭ್ ಹಾಗೂ ಕರ್ತವ್ಯದಲ್ಲಿದ್ದ ಪಿಎಸ್‌ಐ ಮಂಜುನಾಥ್ ಅವರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. 

ಘಟನೆಯ ಗಂಭೀರತೆಯನ್ನು ಅರಿತ ರಾಯಚೂರು ಜಿಲ್ಲಾಧಿಕಾರಿ ಪೂವಿತಾ ಅವರು ಈಗ ಪೊಲೀಸ್ ಸಿಬ್ಬಂದಿಯ ವಿರುದ್ಧವೇ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರ ಕಾರ್ಯವೈಖರಿ ಹಾಗೂ ವೈಫಲ್ಯವನ್ನು ನೇರವಾಗಿ ಉಲ್ಲೇಖಿಸಿರುವ ಡಿಸಿ ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅರುಣಾಂಶು ಗಿರಿ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ಡಿಜೆ ಸೌಂಡ್ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕರ್ತವ್ಯಲೋಪವೆಸಗಿದ ಸಿಬ್ಬಂದಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಅಲ್ಲದೆ, ತಕ್ಷಣವೇ ಜಿಲ್ಲೆಯಲ್ಲಿ ಡಿಜೆಗಳನ್ನು ಬಂದ್ ಮಾಡಿಸಬೇಕು ಹಾಗೂ ನಿಯಮ ಉಲ್ಲಂಘಿಸುವ ಡಿಜೆ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಡಿಜೆ ಸೌಂಡ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ, ಅದಕ್ಕೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳು ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಪತ್ರದಲ್ಲಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. 

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿ ಪೂವಿತಾ ಅವರು ಎಸ್ಪಿ ಅರುಣಾಂಶು ಗಿರಿ ಅವರಿಗೆ ಈ ರೀತಿ ನೇರ ಎಚ್ಚರಿಕೆಯ ಪತ್ರ ಬರೆದಿರುವುದು ಇದೀಗ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಜಿಲ್ಲಾಧಿಕಾರಿಯ ಈ ನಡೆಗೆ ಪೊಲೀಸ್ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.