ರಾಯಚೂರು: ಕಾವಿ ಬಟ್ಟೆ ಹಾಕಿಕೊಂಡು, ಸಾಧು ಸಂತರಂತೆ ಬಂದು ನಿಮ್ಮನ್ನ ಹಾಡಿ ಹೊಗಳುವವರನ್ನು ಕಣ್ಣುಮುಚ್ಚಿ ನಂಬುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ರಾಯಚೂರಿನ ಸಿಂಧನೂರು ನಗರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಸಾಧು ಸಂತರ ಸೋಗಿನಲ್ಲಿ ಬಂದು, ಹೂವುಗಳನ್ನು ನೀಡಿ ಸಮ್ಮೋಹನ (Hypnotize) ಮಾಡುವ ಮೂಲಕ ಸಾರ್ವಜನಿಕರ ಹಣ ಮತ್ತು ಚಿನ್ನಾಭರಣಗಳನ್ನು ದೋಚುತ್ತಿರುವ ಖದೀಮರ ಕೃತ್ಯ ಈಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸತ್ಕಾರ ಮಾಡಿದ್ದಕ್ಕೆ ಸಿಕ್ಕಿದ್ದೇನು?
ಸಿಂಧನೂರು ನಗರದ ಪ್ರಮುಖ ರಸ್ತೆಯಲ್ಲಿರುವ ‘ಸಾಯಿ ಮೆಡಿಕಲ್ಸ್’ ಫಾರ್ಮಸಿಗೆ ಸಾಧುವೊಬ್ಬ ಬಂದಿದ್ದ. ಬಿಸಿಲಿನ ಬೇಗೆಯಿಂದ ಬಳಲಿದ್ದ ಆತ, ಕುಡಿಯಲು ನೀರು ಕೇಳಿದ್ದಾನೆ. ಮೆಡಿಕಲ್ ಅಂಗಡಿಯ ಮಾಲೀಕ ವಿಷ್ಣುದತ್ತು ಅವರು ಮಾನವೀಯತೆ ಮತ್ತು ಸಾಧುಗಳ ಮೇಲಿನ ಭಕ್ತಿಯಿಂದ ಫ್ರಿಡ್ಜ್‌ನಿಂದ ತಣ್ಣನೆಯ ನೀರನ್ನು ತಂದುಕೊಟ್ಟು ಸತ್ಕರಿಸಿದ್ದಾರೆ.
ನೀರು ಕುಡಿದ ಖದೀಮ, ಮಾಲೀಕರ ಭಕ್ತಿಗೆ ಮೆಚ್ಚುಗೆ ಸೂಚಿಸುವಂತೆ ನಟಿಸಿದ್ದಾನೆ. “ನಿನಗೆ ಮತ್ತು ನಿನ್ನ ಮಕ್ಕಳಿಗೆ ಒಳಿತಾಗಲಿದೆ. ನಿಮ್ಮ ಸಂಕಷ್ಟಗಳೆಲ್ಲವೂ ದೂರಾಗಲಿವೆ” ಎಂದು ಆಶೀರ್ವದಿಸುವ ನೆಪದಲ್ಲಿ ತನ್ನ ಕೈಯಲ್ಲಿದ್ದ ಎರಡು ಹೂವುಗಳನ್ನು ವಿಷ್ಣುದತ್ತು ಅವರ ಕೈಗೆ ನೀಡಿದ್ದಾನೆ.
ಹೂವು ಮೂಸುತ್ತಿದ್ದಂತೆ ಮಂಕುಬೂದಿ!
ಖದೀಮ ನೀಡಿದ ಆ ಎರಡು ಹೂವುಗಳ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕ ಪ್ರಜ್ಞೆ ತಪ್ಪಿದವರಂತೆ, ಮಂಕು ಬಡಿದ ಸ್ಥಿತಿಗೆ ತಲುಪಿದ್ದಾರೆ. ತಮಗೆ ಅರಿವಿಲ್ಲದಂತೆಯೇ ಸಮ್ಮೋಹನಕ್ಕೆ ಒಳಗಾದ ಮಾಲೀಕರು, ಖುದ್ದು ತಾವೇ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಮತ್ತು ಬೆರಳಿಗೆ ಹಾಕಿದ್ದ ಬೆಲೆಬಾಳುವ ಚಿನ್ನದ ಉಂಗುರವನ್ನು ಬಿಚ್ಚಿ ಆ ಖದೀಮ ಸಾಧುವಿನ ಕೈಗೆ ಕೊಟ್ಟಿದ್ದಾರೆ. ಹಣ ಮತ್ತು ಚಿನ್ನವನ್ನು ಲೂಟಿ ಮಾಡಿದ ಆತ, ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾನೆ. ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರು ಸಂಪೂರ್ಣ ಪ್ರಜ್ಞಾವಸ್ಥೆಗೆ ಬಂದಾಗಲೇ ತಮಗೆ ವಂಚನೆಯಾಗಿರುವುದು ಅರಿವಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಖದೀಮರ ಜಾಲ
ಈ ವಿಚಿತ್ರ ಲೂಟಿ ಪ್ರಕರಣದ ಕುರಿತು ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಸಾಧುಗಳ ಸೋಗಿನಲ್ಲಿರುವ ಖದೀಮರ ಇಡೀ ತಂಡ ನಗರದಾದ್ಯಂತ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ಈ ದೃಶ್ಯಗಳ ಆಧಾರದ ಮೇಲೆ ಸಿಂಧನೂರು ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
