S Shorts

Reverse ತೆಗೆದುಕೊಳ್ಳುವಾಗ ವಿದ್ಯಾರ್ಥಿನಿಯರ ಮೇಲೆ ಹರಿದ Thar, 17 ವರ್ಷದ ಯುವತಿ ದುರ್ಮರಣ!

Reverse ತೆಗೆದುಕೊಳ್ಳುವಾಗ ವಿದ್ಯಾರ್ಥಿನಿಯರ ಮೇಲೆ ಹರಿದ Thar, 17 ವರ್ಷದ ಯುವತಿ ದುರ್ಮರಣ!
Author: Sagaradventure
Posted By: Sagaradventure
Updated: May 9, 2026 | 4:58 PM

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಮಹೀಂದ್ರಾ ಥಾರ್ ವಾಹನವೊಂದು ವಿದ್ಯಾರ್ಥಿನಿಯರ ಮೇಲೆ ಹರಿದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಅಪಘಾತ ಸಂಭವಿಸಿದೆ. ಮೃತ ದುರ್ದೈವಿಯನ್ನು ಅರಗಿನಮರ ಕ್ಯಾಂಪ್ ನಿವಾಸಿ ಭೂಮಿಕಾ (17) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಮೇಘನಾ, ಮಹೇಶ್ವರಿ ಮತ್ತು ಜಹೀದಾ ಎಂಬ ಇತರ 3 ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ವಾಹನ ಚಾಲಕನು ಥಾರ್ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವಾಗ ಏಕಾಏಕಿ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ವಾಹನ ಹತ್ತಿಸಿದ್ದಾನೆ. ವಾಹನದ ಚಕ್ರದಡಿ ಸಿಲುಕಿದ ಭೂಮಿಕಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ಈ ಭೀಕರ ಅಪಘಾತದ ದೃಶ್ಯಾವಳಿಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಂಧನೂರು ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಈ ದುರಂತಕ್ಕೆ ಕಾರಣನಾದ ಥಾರ್ ವಾಹನ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈ ಕುರಿತು ಸಿಂಧನೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.