ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ ನಡೆದಿದ್ದ 3 ವರ್ಷದ ಹೆಣ್ಣುಮಗುವಿನ ಮೇಲಿನ ಅಮಾನುಷ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯವು ಐತಿಹಾಸಿಕ ಹಾಗೂ ತ್ವರಿತ ತೀರ್ಪು ಪ್ರಕಟಿಸಿದೆ. ಈ ಪೈಶಾಚಿಕ ಕೃತ್ಯ ಎಸಗಿದ 65 ವರ್ಷದ ವೃದ್ಧ ಆರೋಪಿಯನ್ನು ದೋಷಿ ಎಂದು ಘೋಷಿಸಿರುವ ನ್ಯಾಯಾಲಯ, ಆತನಿಗೆ ಗರಿಷ್ಠ ಶಿಕ್ಷೆಯಾದ ಮರಣದಂಡನೆ (ಗಲ್ಲು ಶಿಕ್ಷೆ) [Death Penalty Voted] ವಿಧಿಸಿದೆ. ಅಪರಾಧ ನಡೆದ ಕೇವಲ 60 ದಿನಗಳ ಒಳಗಾಗಿ ಈ ತೀರ್ಪು ಹೊರಬಿದ್ದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಸಮಾಧಾನ ಮೂಡಿಸಿದೆ.
ಮೇ 1 ರಂದು ಈ ಘೋರ ಕೃತ್ಯ ನಡೆದಿತ್ತು. ತನ್ನ ಅಜ್ಜಿ ಮನೆಗೆ ಬಂದಿದ್ದ 3 ವರ್ಷದ ಪುಟ್ಟ ಬಾಲಕಿಗೆ ತಿನಿಸು ಕೊಡಿಸುವ ಆಮಿಷ ತೋರಿಸಿ ಕಿರಾತಕ ಆರೋಪಿ ಸಮೀಪದ ಹಟ್ಟಿಯೊಂದಕ್ಕೆ ಅಪಹರಿಸಿದ್ದ. ಅಲ್ಲಿ ಮಗುವಿನ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿ, ಬಳಿಕ ಬರ್ಬರವಾಗಿ ಕೊಲೆ ಮಾಡಿದ್ದ. ಬಾಲಕಿ ನಾಪತ್ತೆಯಾದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಹಟ್ಟಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಈ ಘಟನೆ ಪುಣೆ ಜಿಲ್ಲಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು, ನಸ್ರಾಪುರದಲ್ಲಿ ಸಾರ್ವಜನಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದರು.
60 ದಿನಗಳಲ್ಲಿ ತನಿಖೆ ಮತ್ತು ವಿಚಾರಣೆ ಮುಕ್ತಾಯ:
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪುಣೆ ಪೊಲೀಸರು ಘಟನೆಯ ದಿನವೇ ಆರೋಪಿಯನ್ನು ಹೆಡೆಮುರುಡು ಕಟ್ಟಿದ್ದರು. ಕೇವಲ 16 ದಿನಗಳಲ್ಲಿ 1,200 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು ಮೇ 28 ರಂದು ಆರೋಪ ನಿಗದಿಪಡಿಸಿ, ಜೂನ್ 20 ಕ್ಕೆ ಅಂತಿಮ ವಾದ-ಪ್ರತಿವಾದಗಳನ್ನು ಆಲಿಸಿತು. ಜೂನ್ 25 ರಂದು ಆರೋಪಿಯನ್ನು ದೋಷಿ ಎಂದು ಪ್ರಕಟಿಸಿ, ಇಂದು (ಜೂನ್ 30) ಅಂತಿಮವಾಗಿ ಗಲ್ಲು ಶಿಕ್ಷೆಯ ತೀರ್ಪು ಪ್ರಕಟಿಸಿದೆ.
“ಇದು ಅತ್ಯಂತ ಗಂಭೀರ ಹಾಗೂ ಕ್ರೂರ ಸ್ವರೂಪದ ಅಪರಾಧವಾಗಿದೆ. ಆರೋಪಿ ಈ ಹಿಂದೆಯೂ ಎರಡು ಪ್ರಕರಣಗಳಲ್ಲಿ ಖುಲಾಸೆಯಾಗಿದ್ದರೂ, ಆತನಲ್ಲಿ ಯಾವುದೇ ಪಶ್ಚಾತ್ತಾಪದ ಲಕ್ಷಣಗಳು ಕಾಣುತ್ತಿಲ್ಲ. ಆತನನ್ನು ತಿದ್ದುವ ಸಮಯ ಮೀರಿಹೋಗಿದ್ದು, ಸಮಾಜಕ್ಕೆ ದೊಡ್ಡ ಕಂಟಕವಾಗಿದ್ದಾನೆ” ಎಂದು ನ್ಯಾಯಾಲಯ ಕಟು ಶಬ್ದಗಳಲ್ಲಿ ಎಚ್ಚರಿಸಿದೆ. ಆರೋಪಿ ಪರ ವಕೀಲರು ವಯಸ್ಸಿನ ಕಾರಣ ನೀಡಿ ಜೀವಾವಧಿ ಶಿಕ್ಷೆಗೆ ಮನವಿ ಮಾಡಿದರೂ, ಸರ್ಕಾರಿ ವಕೀಲರ ಬಲವಾದ ಸಾಂದರ್ಭಿಕ ಸಾಕ್ಷ್ಯಗಳ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಗರಿಷ್ಠ ಶಿಕ್ಷೆಯನ್ನೇ ಪ್ರಕಟಿಸಿದೆ.
