‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ ‘ರಿಷಬ್ ಶೆಟ್ಟಿ ಫಿಲಂಸ್’ ಇದೀಗ ಹೊಸ ಪ್ರತಿಭೆಗಳಿಗಾಗಿ ಬೃಹತ್ ಆಡಿಷನ್ ಕರೆಯೊಂದನ್ನು ಘೋಷಿಸಿದೆ. ತಮ್ಮ ಸಂಸ್ಥೆಯ ಮುಂಬರುವ ಬಹುನಿರೀಕ್ಷಿತ ಹೊಸ ಚಿತ್ರಕ್ಕಾಗಿ ನೂತನ ಕಲಾವಿದರನ್ನು ಹುಡುಕುತ್ತಿದ್ದು, ಇದೇ ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಓಪನ್ ಆಡಿಷನ್ ನಡೆಯಲಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟರ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಅಭಿಮಾನಿ ಮತ್ತು ತಾರೆಯ ನಡುವಿನ ಸಂಬಂಧಕ್ಕೆ ಹೊಸ ಅರ್ಥ ನೀಡುವಂತೆ “ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ, ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ. ನಿಮ್ಮ ಸಿನಿಮಾ ಪಯಣ ಇಲ್ಲಿಂದಲೇ ಆರಂಭವಾಗಬಹುದು” ಎಂದು ಆಕರ್ಷಕ ಸಾಲುಗಳ ಮೂಲಕ ಹೊಸಬರನ್ನು ಚಿತ್ರರಂಗದತ್ತ ಸ್ವಾಗತಿಸಿದ್ದಾರೆ.
ಈ ಹೊಸ ಪ್ರಾಜೆಕ್ಟ್‌ನಲ್ಲಿ ಪ್ರಮುಖ ಪಾತ್ರಗಳಿಗೆ 20 ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20 ರಿಂದ 60 ವರ್ಷದೊಳಗಿನ ಮಹಿಳಾ ನಟರ ಅಗತ್ಯವಿದೆ. ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ತಿಳಿದಿರಬೇಕು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಭಾಷಾ ಸೊಗಡು ಮತ್ತು ಆಡುಭಾಷೆಯ ಶೈಲಿಯಲ್ಲಿ ಮಾತನಾಡುವ ನಟರಿಗೆ ಈ ಪಾತ್ರಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಮಣ್ಣಿನ ಸೊಗಡಿನ ಕಥೆಗಳಿಗೆ ಜೀವ ತುಂಬುವಲ್ಲಿ ಸದಾ ಮುಂಚೂಣಿಯಲ್ಲಿರುವ ರಿಷಬ್ ಶೆಟ್ಟಿ, ಈ ಬಾರಿಯೂ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಬೆಳ್ಳಿಪರದೆಯ ಮೇಲೆ ತರಲು ಮುಂದಾಗಿದ್ದಾರೆ.
ಬಿಡುಗಡೆಯಾಗಿರುವ ಅಧಿಕೃತ ಪೋಸ್ಟರ್‌ಗಳಲ್ಲಿ ಬೈಕ್ ಹಾಗೂ ಪ್ರೇರಣಾದಾಯಕ ಪ್ರಯಾಣದ (ಟ್ರಾವೆಲ್) ಥೀಮ್ ಎದ್ದು ಕಾಣುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾವಾಗಲೂ ಕರ್ನಾಟಕದ ಸಂಸ್ಕೃತಿ ಮತ್ತು ನೈಜ ಜೀವನದ ಹಿನ್ನೆಲೆಯನ್ನು ಒಳಗೊಂಡ ವಿಶಿಷ್ಟ ಕಥೆಗಳನ್ನು ಕಟ್ಟಿಕೊಡುವ ರಿಷಬ್ ಶೆಟ್ಟಿ ಅವರ ಈ ಹೊಸ ಸಿನಿಮಾದ ಕಥೆ ಕೂಡ ವಿಭಿನ್ನವಾಗಿರಲಿದೆ ಎಂಬುದನ್ನು ಇದು ಸೂಚಿಸುತ್ತಿದೆ.
ಚಿತ್ರರಂಗ ಪ್ರವೇಶಿಸಲು ಉತ್ಸುಕರಾಗಿರುವ ಹೊಸ ಪ್ರತಿಭೆಗಳಿಗೆ ಹಾಗೂ ರಂಗಭೂಮಿ ಕಲಾವಿದರಿಗೆ ಈ ಆಡಿಷನ್ ಒಂದು ಸುವರ್ಣಾವಕಾಶವಾಗಿದ್ದು, ಚಿತ್ರತಂಡದ ಈ ವಿನೂತನ ಕರೆಗೆ ಸ್ಯಾಂಡಲ್‌ವುಡ್ ವಲಯದಲ್ಲಿ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://x.com/shetty_rishab/status/2102996747681505421

