ದೆಹಲಿಯ ಯಮುನಾ ನದಿ ಪಾತ್ರದಲ್ಲಿ ಬೆಳೆಯಲಾಗುತ್ತಿರುವ ತರಕಾರಿಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗುವ ಜೊತೆಗೆ ಕ್ಯಾನ್ಸರ್ ರೋಗದ ಭಾರಿ ಅಪಾಯವಿದೆ ಎಂಬ ಆತಂಕಕಾರಿ ವಿಚಾರವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೀನಬಂಧು ಸಾಹೂ ಅವರ ನೇತೃತ್ವದಲ್ಲಿ ನಡೆದ ಈ ಸಂಶೋಧನಾ ವರದಿಯು ‘ಎನರ್ಜಿ ನೆಕ್ಸಸ್’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಸಂಸ್ಕರಿಸದ ಯಮುನಾ ನದಿಯ ತ್ಯಾಜ್ಯನೀರನ್ನು ಬಳಸಿ ಬೆಳೆಯಲಾಗುವ ದೈನಂದಿನ ಬಳಕೆಯ ತರಕಾರಿಗಳಲ್ಲಿ ಮಿತಿಮೀರಿದ ಪ್ರಮಾಣದಲ್ಲಿ ವಿಷಕಾರಿ ಭಾರ ಲೋಹಗಳು (Heavy metals) ಪತ್ತೆಯಾಗಿವೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ದೆಹಲಿಯು ಯಮುನಾ ನದಿಯ ಒಟ್ಟು ಮಾಲಿನ್ಯದ ಶೇಕಡಾ 70 ರಿಂದ 80 ರಷ್ಟು ಪಾಲನ್ನು ಹೊಂದಿದೆ. ಹೀಗಿದ್ದರೂ, ನಗರದ ಹೊರವಲಯದ ರೈತರು ಕೃಷಿ ಮತ್ತು ನೀರಾವರಿ ಉದ್ದೇಶಗಳಿಗಾಗಿ ಇದೇ ಕಲುಷಿತ ನೀರನ್ನೇ ಅವಲಂಬಿಸಿರುವುದು ಈ ಭೀಕರ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
ಈ ಕಲುಷಿತ ನೀರಿನ ನಿರಂತರ ಬಳಕೆಯಿಂದಾಗಿ ತರಕಾರಿಗಳಲ್ಲಿ ನಿಕಲ್, ಕ್ರೋಮಿಯಂ, ಕ್ಯಾಡ್ಮಿಯಂ ಮತ್ತು ಸೀಸದಂತಹ (Lead) ಅಪಾಯಕಾರಿ ವಿಷಕಾರಿ ಲೋಹಗಳು ಶೇಖರಣೆಯಾಗುತ್ತಿವೆ. ಈ ಲೋಹಗಳ ಪ್ರಮಾಣವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ನಿಗದಿಪಡಿಸಿರುವ ಸುರಕ್ಷತಾ ಮಿತಿಗಿಂತ ಅತ್ಯಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಅಧ್ಯಯನವು ಕಂಡುಕೊಂಡಿದೆ.
ಆಘಾತಕಾರಿ ಅಂಶವೆಂದರೆ, ಪಾಲಕ್ ಸೊಪ್ಪಿನಲ್ಲಿ ನಿಕಲ್ ಪ್ರಮಾಣವು ನಿಗದಿತ ಮಿತಿಗಿಂತ 97 ಪಟ್ಟು ಹೆಚ್ಚಾಗಿದ್ದರೆ, ಈರುಳ್ಳಿಯಲ್ಲಿ 65 ಪಟ್ಟು ಹೆಚ್ಚಾಗಿರುವುದು ಪತ್ತೆಯಾಗಿದೆ. ಅದೇ ರೀತಿ, ಸಾಸಿವೆ ಬೆಳೆಯಲ್ಲಿ ಕ್ರೋಮಿಯಂ ಮಟ್ಟವು 22 ಪಟ್ಟು ಹೆಚ್ಚಾಗಿದೆ. ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಣ್ಣು ಮತ್ತು ಬೆಳೆಗಳ ನಿರಂತರ ಮೇಲ್ವಿಚಾರಣೆ ನಡೆಸಬೇಕು, ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ವಿಷಕಾರಿ ಲೋಹಗಳನ್ನು ಕಡಿಮೆ ಪ್ರಮಾಣದಲ್ಲಿ ಹೀರಿಕೊಳ್ಳುವ ಪರ್ಯಾಯ ಬೆಳೆಗಳನ್ನು ಬೆಳೆಯಲು ರೈತರನ್ನು ತಕ್ಷಣವೇ ಉತ್ತೇಜಿಸಬೇಕು ಎಂದು ಸಂಶೋಧಕರು ಸರ್ಕಾರಕ್ಕೆ ತುರ್ತು ಸಲಹೆ ನೀಡಿದ್ದಾರೆ.
