ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಾಲೂರು ಬಿಜೆಪಿ ಮುಖಂಡ ಶಿವಕುಮಾರ್ (50) ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರು ಚಿತ್ರದುರ್ಗದಿಂದ ಮಾಲೂರಿಗೆ ತಮ್ಮ ರೇಂಜ್ ರೋವರ್ (Range Rover) ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಹೊಸಕೋಟೆ-ದಾಬಸ್‌ಪೇಟೆ ರಿಂಗ್ ರಸ್ತೆ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಓವರ್‌ಟೇಕ್ ಮಾಡುವ ಭರದಲ್ಲಿ ಅತಿ ವೇಗವಾಗಿ ನುಗ್ಗಿದ ರೇಂಜ್ ರೋವರ್ ಕಾರು, ಮುಂದೆ ಸಾಗುತ್ತಿದ್ದ ಗ್ಯಾಸ್ ಲಾರಿಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ರೇಂಜ್ ರೋವರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶಿವಕುಮಾರ್ ಅವರು ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಇತರ ಮೂವರು ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಶಿವಕುಮಾರ್ ಅವರು ಮಾಲೂರು ಭಾಗದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡರಾಗಿದ್ದು, ಮುಂಬರುವ ಚುನಾವಣೆಯಲ್ಲಿ ಬಳಕಾಲೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂದು ಹೇಳಲಾಗಿದೆ. ಈ ಭೀಕರ ಅಪಘಾತದ ಕುರಿತು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
