ಬೆಂಗಳೂರು: ಅಕ್ರಮ ಅದಿರು ಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Sail) ಅವರ ವೈದ್ಯಕೀಯ ತಪಾಸಣೆಯ ದಿನಾಂಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. “ದಿನಾಂಕ ಮತ್ತು ಸಮಯವನ್ನು ಶಾಸಕರು ಮತ್ತು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಪರಸ್ಪರ ಚರ್ಚಿಸಿ ನಿರ್ಧರಿಸಿ” ಎಂದು ನ್ಯಾಯಾಲಯ ಆದೇಶಿಸಿದೆ.
ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಕೋರಿ ಸತೀಶ್ ಸೈಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಗುರುವಾರ ನಡೆಸಿತು. ಈ ವೇಳೆ ಇಡಿ ಪರ ವಕೀಲರು, “ದೆಹಲಿಯ ಏಮ್ಸ್ (AIIMS) ವೈದ್ಯರು ಡಿಸೆಂಬರ್ 19ರ ಮಧ್ಯಾಹ್ನ ಅಥವಾ 20ರ ಬೆಳಗ್ಗೆ ತಪಾಸಣೆಗೆ ಸಮಯ ನಿಗದಿಪಡಿಸಿದ್ದಾರೆ” ಎಂದು ಮಾಹಿತಿ ನೀಡಿದರು.
ಇಡಿ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಸೈಲ್ ಪರ ವಕೀಲರು, “ಸದ್ಯ ದೆಹಲಿಯಲ್ಲಿ ವಾಯುಮಾಲಿನ್ಯದ (Delhi Pollution) ಮಟ್ಟ ಹೆಚ್ಚಿದ್ದು, ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ತಪಾಸಣೆಗೆ ಹಾಜರಾಗಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಅದೆಲ್ಲಾ ನಮಗೆ ಸಂಬಂಧಿಸಿಲ್ಲ. ಇಡಿ ಅಧಿಕಾರಿಗಳು ಮತ್ತು ಸೈಲ್ ಒಟ್ಟಾಗಿ ಕುಳಿತು, ವೈದ್ಯರ ಲಭ್ಯತೆ ನೋಡಿಕೊಂಡು ಸೂಕ್ತ ದಿನಾಂಕ ತೀರ್ಮಾನಿಸಿ” ಎಂದು ಖಡಕ್ ಆಗಿ ಸೂಚಿಸಿದೆ.
ದಿನಾಂಕ ನಿರ್ಧರಿಸಲು ವಿಚಾರಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಸತೀಶ್ ಸೈಲ್ ಅವರಿಗೆ ನೀಡಲಾಗಿರುವ ಮಧ್ಯಂತರ ಜಾಮೀನನ್ನು ವಿಸ್ತರಿಸಿ, ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ನಿಗದಿಪಡಿಸಿದೆ.
