S Shorts

ವಚನಾನಂದ ಶ್ರೀಗಳಿಗೆ ಹೈಕೋರ್ಟ್ ಶಾಕ್: ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದು!

ವಚನಾನಂದ ಶ್ರೀಗಳಿಗೆ ಹೈಕೋರ್ಟ್ ಶಾಕ್: ಪೋಕ್ಸೋ ಪ್ರಕರಣದಲ್ಲಿ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದು!
Author: Meghana Gowda
Posted By: Meghana Gowda
Updated: Jun 25, 2026 | 5:22 PM

ಬೆಂಗಳೂರು: ಪೋಕ್ಸೋ (POCSO) ಪ್ರಕರಣದಲ್ಲಿ ಸಿಲುಕಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ (Vachanananda Swamiji) ಅವರಿಗೆ ಹೈಕೋರ್ಟ್ ಭಾರಿ ಆಘಾತ ನೀಡಿದೆ. ಸ್ವಾಮೀಜಿ ಅವರಿಗೆ ಈ ಹಿಂದೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನೀಡಿದ ವಿಧಾನ ಸರಿಯಲ್ಲ ಎಂದು ಸ್ಪಷ್ಟಪಡಿಸಿದೆ. ಮೇ 7 ರಂದು ಸ್ವಾಮೀಜಿ ವಿರುದ್ಧ ಪೋಕ್ಸೋ ದೂರು ದಾಖಲಾಗಿದ್ದರೆ, ಅದರ ಹಿಂದಿನ ದಿನ ಅಂದರೆ ಮೇ 6 ರಂದೇ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ದೂರು ದಾಖಲಾಗುವ ಒಂದು ವಾರ ಮುನ್ನವೇ ಜಾಮೀನು ಪ್ರಕ್ರಿಯೆ ನಡೆದಿರುವ ವಿಧಾನ ಆಘಾತಕಾರಿ ಎಂದು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, ಮೇಲ್ನೋಟಕ್ಕೆ ಈ ಕ್ರಮ ಸರಿಯಲ್ಲ ಎಂದು ತೀರ್ಪು ನೀಡಿ ಜಾಮೀನು ರದ್ದುಗೊಳಿಸಿದೆ.

ಹೈಕೋರ್ಟ್‌ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದರೂ, ವಚನಾನಂದ ಶ್ರೀಗಳಿಗೆ ರೆಗ್ಯುಲರ್ (ನಿಯಮಿತ) ಜಾಮೀನು ಅರ್ಜಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿದೆ. ಅಲ್ಲಿಯವರೆಗೆ ನಿರೀಕ್ಷಣಾ ಜಾಮೀನಿನ ರಕ್ಷಣೆ ಮುಂದುವರಿಯಲಿದ್ದು, ಸದ್ಯಕ್ಕೆ ಸ್ವಾಮೀಜಿ ಬಂಧನ ಭೀತಿಯಿಂದ ಪಾರಾಗಿದ್ದಾರೆ.