ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟುಕೊಳ್ಳುವುದು ಸೇಫ್ ಅಲ್ಲ ಎಂದು ಜನಸಾಮಾನ್ಯರು ಬ್ಯಾಂಕ್ ಲಾಕರ್‌ಗಳ ಮೊರೆ ಹೋಗುತ್ತಾರೆ. ಆದರೆ ನಂಬಿ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನವೇ ಮಂಗಮಾಯವಾದರೆ ಏನು ಮಾಡುವುದು ಎಂಬ ಆತಂಕ ಮೂಡಿಸುವಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಬ್ಯಾಂಕ್‌ಗಳು ಸೇಫ್ ಎಂದು ನಂಬಿ ಚಿನ್ನ ಇಟ್ಟರೆ ಹೀಗಾಗುತ್ತಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರನ್ನು ಕಾಡಲಾರಂಭಿಸಿದೆ.
ಮದುವೆ ಸಮಯದಲ್ಲಿ ಮನೆಯಲ್ಲಿ ಚಿನ್ನಾಭರಣ ಇಟ್ಟುಕೊಳ್ಳುವುದು ಸೇಫ್ ಅಲ್ಲ ಎಂಬ ಕಾರಣಕ್ಕೆ ಸುಜಾತಾ ಎಂಬುವವರು ಸದಾಶಿವನಗರದ RMV ಎಕ್ಸ್‌ಟೆನ್ಶನ್‌ನಲ್ಲಿರುವ SBI ಬ್ಯಾಂಕ್‌ನಲ್ಲಿ ಲಾಕರ್ ಪಡೆದು ತಮ್ಮ ಒಡವೆಗಳನ್ನು ಭದ್ರವಾಗಿ ಇಟ್ಟಿದ್ದರು. ಆದರೆ, ಮದುವೆ ಮುಗಿದ ಬಳಿಕ ಚಿನ್ನ ತರಲು ಬ್ಯಾಂಕ್‌ಗೆ ಹೋದ ದೂರುದಾರೆಗೆ ಆಘಾತ ಕಾದಿತ್ತು. ಲಾಕರ್ ತೆರೆದು ನೋಡಿದಾಗ ಅಲ್ಲಿಟ್ಟಿದ್ದ ಕೆಲವು ಚಿನ್ನಾಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸುಜಾತಾ ಅವರು ಸುಮಾರು 160 ಗ್ರಾಂ ತೂಕದ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು. ಇದರಲ್ಲಿ ಜುಮುಕಿ, ಚಿನ್ನದ ಬಳೆ ಹಾಗೂ ಇನ್ನಿತರ ಬೆಲೆಬಾಳುವ ಒಡವೆಗಳಿದ್ದವು. ಆದರೆ ಆಶ್ಚರ್ಯದ ಸಂಗತಿಯೆಂದರೆ, ಚಿನ್ನ ಇಟ್ಟ ಕೇವಲ 9 ದಿನಗಳಲ್ಲೇ ಈ ಆಭರಣಗಳು ಕಳವಾಗಿವೆ. ಈ ಬಗ್ಗೆ ಆತಂಕಗೊಂಡ ದೂರುದಾರೆ ತಕ್ಷಣವೇ ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೂರುದಾರರು ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಆದರೆ, ತದನಂತರ ಆ ಆಭರಣಗಳು ಏನಾಗಿವೆ, ಹೇಗೆ ಕಳ್ಳತನವಾಯಿತು ಎಂಬುದು ಮಾತ್ರ ನಿಗೂಢವಾಗಿದೆ. ಬ್ಯಾಂಕ್ ಲಾಕರ್‌ನಿಂದಲೇ ಆಭರಣ ಕಳ್ಳತನವಾಗಿರುವ ಬಗ್ಗೆ ಇದೀಗ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
