ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ (Kempegowda Airport) ವಿಮಾನ ನಿಲ್ದಾಣದ ಟರ್ಮಿನಲ್-2ರ (Terminal 2) ಹೊಸ ರನ್‌ವೇನಲ್ಲಿ ಇಂದು ಭಾರಿ ಭದ್ರತಾ ಲೋಪ ಕಂಡುಬಂದಿದೆ. ವಿಮಾನಗಳ ಹಾರಾಟ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯೇ ಎರಡು ಬೀದಿನಾಯಿಗಳು (Stray Dogs) ರನ್‌ವೇಗೆ ನುಗ್ಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ವಿವರ:
ಎರಡು ಬೀದಿನಾಯಿಗಳು ವಿಮಾನ ನಿಲ್ದಾಣದ ಭದ್ರತಾ ಕೋಟೆಯನ್ನು ಮೀರಿ ರನ್‌ವೇಗೆ ನುಗ್ಗಿ ವಿಮಾನಗಳ ನಿಲುಗಡೆಯ ಜಾಗದಲ್ಲಿ ಓಡಾಡಿವೆ. ನಾಯಿಗಳು ನುಗ್ಗಿದ ಸಮಯದಲ್ಲಿ ಅದೃಷ್ಟವಶಾತ್ ರನ್‌ವೇ ಮೇಲೆ ಯಾವುದೇ ವಿಮಾನಗಳು ಲ್ಯಾಂಡಿಂಗ್ ಅಥವಾ ಟೇಕ್-ಆಫ್ ಆಗುತ್ತಿರಲಿಲ್ಲ. ಇದರಿಂದಾಗಿ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ರನ್‌ವೇನಲ್ಲಿ ನಾಯಿಗಳನ್ನು ಕಂಡ ಕೂಡಲೇ ಎಚ್ಚೆತ್ತುಕೊಂಡ ಏರ್ಪೋರ್ಟ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹರಸಾಹಸ ಪಟ್ಟು ಎರಡೂ ನಾಯಿಗಳನ್ನು ಯಶಸ್ವಿಯಾಗಿ ಸೆರೆಹಿಡಿದರು. ಅಂತರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಭದ್ರತೆ ಹೊಂದಿರುವ ವಿಮಾನ ನಿಲ್ದಾಣದ ರನ್‌ವೇಗೆ ನಾಯಿಗಳು ಹೇಗೆ ಪ್ರವೇಶಿಸಿದವು ಎಂಬುದು ಈಗ ಗಂಭೀರ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆಯೂ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2 ರ ಪರಿಸರದಲ್ಲಿ ಬೀದಿನಾಯಿಗಳ ಹಾವಳಿ ಕಂಡುಬಂದಿದ್ದು, ಪ್ರಯಾಣಿಕರು ಸುರಕ್ಷತೆ ಮತ್ತು ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಇಂದಿನ ಘಟನೆಯಿಂದಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭದ್ರತಾ ಬೇಲಿಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
