ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ನಕಲಿ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಇದೀಗ ಭಾರೀ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ತನಿಖೆ ಕುರಿತು ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪೋಟಕ ವಿಚಾರವೊಂದನ್ನು ಬಹಿರಂಗಪಡಿಸಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ನಿವಾಸದಲ್ಲೇ ವಿಡಿಯೋ ಅಪ್ಲೋಡ್ ಮಾಡಿದ ಮೊಬೈಲ್ ಎಕ್ಸ್ಚೇಂಜ್ ಆಗಿದೆ ಎಂಬ ಅಂಶ ತನಿಖೆಯಿಂದ ಬಯಲಾಗಿದೆ.
ಹೆಚ್ಡಿಕೆ ಸರ್ಕಾರಿ ನಿವಾಸದಲ್ಲೇ ಆರೋಪಿ:
ಪ್ರಜ್ವಲ್ ಪ್ರಸಾದ್ ಎಂಬಾತನ ಸೂಚನೆ ಮೇರೆಗೆ ಕಿಡಿಗೇಡಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋ ಅಪ್ಲೋಡ್ ಮಾಡಿದ ಬಳಿಕ ಹೆಚ್.ಡಿ. ಕುಮಾರಸ್ವಾಮಿ ಅವರ ದೆಹಲಿ ಸರ್ಕಾರಿ ನಿವಾಸಕ್ಕೆ ಆ ಮೊಬೈಲ್ ಅನ್ನು ತಲುಪಿಸಲಾಗಿದೆ. ಅಲ್ಲದೆ, ಪ್ರಕರಣದ ಪ್ರಮುಖ ಆರೋಪಿಯು ಹೆಚ್.ಡಿ.ಕೆ ಅವರ ಸರ್ಕಾರಿ ನಿವಾಸದಲ್ಲೇ ಇದ್ದ ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ಕುಮಾರಸ್ವಾಮಿಗೆ ನೋಟಿಸ್ ಸಾಧ್ಯತೆ:
ಸ್ಟಿಂಗ್ ಪ್ರಕರಣದಲ್ಲಿ ಇದೀಗ ದಿಢೀರ್ ಆಗಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗಿರುವುದರಿಂದ ಇದು ಅವರಿಗೇ ತಿರುಗುಬಾಣವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆರೋಪಿ ಪ್ರಜ್ವಲ್ ಪ್ರಸಾದ್ ಹೇಳಿಕೆಯನ್ನು ಆಧರಿಸಿ ಪೊಲೀಸರು ಕುಮಾರಸ್ವಾಮಿ ಅವರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಪ್ರಜ್ವಲ್ ಪ್ರಸಾದ್ ಬೆನ್ನುಬಿದ್ದಿರುವ ಪೊಲೀಸರು, ವಿಡಿಯೋ ಅಪ್ಲೋಡ್ ಮಾಡಿದವರ ಬಂಧನಕ್ಕೆ ಬಲೆ ಬೀಸಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
