S Shorts

Sirsi-Haveri ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಗುಡುಗಿದ ಸಂಸದ ಕಾಗೇರಿ

Sirsi-Haveri ಹೆದ್ದಾರಿ ಕಾಮಗಾರಿ ವಿಳಂಬ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಗುಡುಗಿದ ಸಂಸದ ಕಾಗೇರಿ
Author: Sagaradventure
Posted By: Sagaradventure
Updated: Apr 21, 2026 | 2:33 PM

ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಕಳಪೆ ನಿರ್ವಹಣೆ ತೋರಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ನೇರ ಹೊಣೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮಗಾರಿ ವಿಳಂಬದಿಂದಾಗಿ ಸಾರ್ವಜನಿಕರಿಗೆ ತೀವ್ರ ಸಂಕಷ್ಟ ಎದುರಾಗಿರುವ ವಾಸ್ತವವನ್ನು ತಾವು ಒಪ್ಪಿಕೊಳ್ಳುವುದಾಗಿ ತಿಳಿಸಿದರು.

ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನಿಯಮಗಳ ಪ್ರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಗ್ ಸ್ಟೇಟ್ಮೆಂಟ್ ನೀಡಿದ್ದಾರೆ.

ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮಳೆಗಾಲ ಆರಂಭವಾಗುವ ಮುನ್ನವೇ ಕನಿಷ್ಠ 8 ಕಿಲೋಮೀಟರ್ ರಸ್ತೆಗೆ ಕಡ್ಡಾಯವಾಗಿ ಡಾಂಬರೀಕರಣ ಮಾಡಲೇಬೇಕು ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಮಳೆಗಾಲದೊಳಗೆ ರಸ್ತೆಯನ್ನು ಸರಿಪಡಿಸಿ ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಸಂಸದರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಹೆದ್ದಾರಿ ವಿಚಾರದಲ್ಲಿ ಟೀಕೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರಿಗೂ ಸಂಸದ ಕಾಗೇರಿ ಖಡಕ್ ತಿರುಗೇಟು ನೀಡಿದ್ದಾರೆ. “ಈ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರ ಎಷ್ಟೆಲ್ಲಾ ತೊಂದರೆ ಕೊಟ್ಟಿದೆ ಎಂಬುದನ್ನು ನಾನು ಈಗ ಹೇಳಲು ಹೋಗುವುದಿಲ್ಲ.

ನೀವು ರಾಜ್ಯದ ಸಚಿವರು, ಕೇವಲ ಭಟ್ಕಳವನ್ನೇ ನೋಡದೆ ಇಡೀ ರಾಜ್ಯದ ಕಡೆ ಗಮನಹರಿಸಿ. ನಿಮ್ಮ ಇಲಾಖೆಯ ಕೆಲಸಗಳನ್ನು ಸರಿಯಾಗಿ ನಿರ್ವಹಿಸುವ ಜೊತೆಗೆ ಕೇಂದ್ರದ ಯೋಜನೆಗಳಿಗೂ ಸಹಕರಿಸಿ. ಅದನ್ನು ಬಿಟ್ಟು ಕೇವಲ ರಾಜಕಾರಣ ಮಾಡುವುದನ್ನು ಬಿಡಿ” ಎಂದು ಸಚಿವರಿಗೆ ನೇರ ವಾಗ್ದಾಳಿ ನಡೆಸಿದ್ದಾರೆ.