S Shorts

ನಾಸಿಕ್ BPO ವಿವಾದ: TCS-ಸಂಯೋಜಿತ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಮತಾಂತರ ಕೇಸ್; ಯಾರು ಈ ನಿದಾ ಖಾನ್?

ನಾಸಿಕ್ BPO ವಿವಾದ: TCS-ಸಂಯೋಜಿತ ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಮತಾಂತರ ಕೇಸ್; ಯಾರು ಈ ನಿದಾ ಖಾನ್?
Author: Sagaradventure
Posted By: Sagaradventure
Updated: Apr 17, 2026 | 10:41 AM

ನಾಸಿಕ್: ಟಿಸಿಎಸ್-ಸಂಯೋಜಿತ (TCS-linked) ಬಿಪಿಒ ಕಚೇರಿಯೊಂದರಲ್ಲಿ ಬೆಳಕಿಗೆ ಬಂದಿರುವ ಹಿಂದೂ ಯುವತಿಯರ ಲೈಂಗಿಕ ಕಿರುಕುಳ ಹಾಗೂ ಮತಾಂತರ ಯತ್ನ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 7 ಜನರನ್ನು ಬಂಧಿಸಿದ್ದಾರೆ. ಇಡೀ ಪ್ರಕರಣದ ‘ಮಾಸ್ಟರ್ ಮೈಂಡ್’ ಹಾಗೂ ‘ಎಚ್‌ಆರ್ ಮುಖ್ಯಸ್ಥೆ’ (HR Head) ಎನ್ನಲಾದ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದರು. ಆದರೆ, ಆಕೆ ಪರಾರಿಯಾಗಿಲ್ಲ, ಗರ್ಭಿಣಿಯಾಗಿರುವ ಆಕೆ ಮನೆಯಲ್ಲೇ ಇದ್ದಾಳೆ ಎಂದು ಆಕೆಯ ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ.

ಯಾರು ಈ ನಿದಾ ಖಾನ್? ಕುಟುಂಬದವರ ವಾದವೇನು? 

ಟಿಸಿಎಸ್-ಸಂಯೋಜಿತ ಬಿಪಿಒ ಕಚೇರಿಯಲ್ಲಿ ನಡೆದ ಪ್ರಕರಣದ 8 ಆರೋಪಿಗಳಲ್ಲಿ ನಿದಾ ಕೂಡ ಒಬ್ಬಳು. ಪೊಲೀಸರು ಆಕೆಯನ್ನು ಈ ಕೃತ್ಯದ ‘ಮಾಸ್ಟರ್ ಮೈಂಡ್’ ಎಂದು ಕರೆದಿದ್ದಾರೆ. ಆದರೆ ಕುಟುಂಬದ ವಾದವೇ ಬೇರೆಯಾಗಿದೆ. 

ಕುಟುಂಬದವರ ಪ್ರಕಾರ, ನಿದಾ ಡಿಸೆಂಬರ್ 2021 ರಲ್ಲಿ ಮಾನವ ಸಂಪನ್ಮೂಲ (HR) ವಿಭಾಗದ ಅಧಿಕಾರಿಯಾಗಿ ಬಿಪಿಒ ಸೇರಿರಲಿಲ್ಲ, ಬದಲಾಗಿ ಆಕೆ ಕೇವಲ ‘ಟೆಲಿಕಾಲರ್’ ಆಗಿ ಕೆಲಸ ಮಾಡುತ್ತಿದ್ದಳು. “ನನ್ನ ಮಗಳು ಇಂತಹ ಯಾವುದೇ ತಪ್ಪು ಮಾಡಿಲ್ಲ. ಆಕೆ ಪ್ರತಿದಿನ ಕೆಲಸಕ್ಕೆ ಹೋಗಿ, ಜನರೊಂದಿಗೆ ಕೇವಲ ಹಾಯ್-ಬೈ ಎಂದಿದ್ದಕ್ಕೇ ಸುಖಾಸುಮ್ಮನೆ ಸಂಕಷ್ಟಕ್ಕೆ ಸಿಲುಕಿದ್ದಾಳೆ” ಎಂದು ನಿದಾಳ ತಂದೆ ಅಳಲು ತೋಡಿಕೊಂಡಿದ್ದಾರೆ.

26 ವರ್ಷದ ನಿದಾ, ನಾಸಿಕ್‌ನಲ್ಲಿಯೇ ಬೆಳೆದು ವಾಣಿಜ್ಯ ವಿಭಾಗದಲ್ಲಿ (B.Com) ಪದವಿ ಪಡೆದಿದ್ದಾಳೆ. ಪ್ರಸ್ತುತ ಕೆಲಸ ಮಾಡುತ್ತಲೇ ಅಂಚೆ-ತೆರಪಿನ ಮೂಲಕ ಎಂಬಿಎ (MBA) ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ವರ್ಷವಷ್ಟೇ ವಿವಾಹವಾಗಿರುವ ಆಕೆ, ಈ ವರ್ಷ ಪತಿಯೊಂದಿಗೆ ಮುಂಬೈಗೆ ಶಿಫ್ಟ್ ಆಗಿದ್ದು, ಮಲಾಡ್‌ನ ಬಿಪಿಒ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ಈ ಕೇಸ್ ಅದೇ ಹೆಸರಿನ ಬೇರೊಬ್ಬ ಮಹಿಳೆಗೆ ಸಂಬಂಧಿಸಿದ್ದು ಎಂದು ಕುಟುಂಬ ಭಾವಿಸಿತ್ತು. ಆದರೆ, ಅದು ತಮ್ಮ ಮಗಳೇ ಎಂದು ತಿಳಿದಾಗ ಇಡೀ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದೆ.

ಏನಿದು ಬಿಪಿಒ ಕಚೇರಿ ಪ್ರಕರಣ? 

23 ವರ್ಷದ ಬಿಪಿಒ ಉದ್ಯೋಗಿಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ನಾಸಿಕ್ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯು ತನ್ನ ಹಿರಿಯ ಸಹೋದ್ಯೋಗಿ ದಾನಿಶ್ ಶೇಖ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ ಮಾಡಿದ್ದಾಳೆ. ದಾನಿಶ್ ತಾನು ಮೊದಲೇ ವಿವಾಹವಾಗಿರುವ ವಿಚಾರವನ್ನು ಮುಚ್ಚಿಟ್ಟು, ತನ್ನೊಂದಿಗೆ ಸಂಬಂಧ ಬೆಳೆಸಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಾನಿಶ್ ಮತ್ತು ಮತ್ತೊಬ್ಬ ಸಹೋದ್ಯೋಗಿ ತೌಸಿಫ್, ಹಿಂದೂ ಧರ್ಮಕ್ಕಿಂತ ಇಸ್ಲಾಂ ಹೇಗೆ ಶ್ರೇಷ್ಠ ಎಂದು ತನ್ನ ಮನವೊಲಿಸಲು ಹಾಗೂ ಮತಾಂತರ ಮಾಡಲು ಯತ್ನಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಇದೇ ವೇಳೆ, ನಿದಾ ಖಾನ್ ಮತ್ತು ತೌಸಿಫ್ ಇಬ್ಬರೂ ಹಿಂದೂ ದೇವರುಗಳ ಬಗ್ಗೆ ಅತ್ಯಂತ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.