ಜೂನ್ 21 ರಂದು ನಡೆಯಲಿರುವ ನೀಟ್ (NEET) ಮರುಪರೀಕ್ಷೆಗೂ ಮುನ್ನ ‘ಟೆಲಿಗ್ರಾಂ’ (Telegram) ಮೆಸೇಜಿಂಗ್ ಆ್ಯಪ್ ಅನ್ನು ಮಾತ್ರ ಏಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂಬುದಕ್ಕೆ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಗುರುವಾರ ಸ್ಪಷ್ಟನೆ ನೀಡಿದೆ. ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (SG) ತುಷಾರ್ ಮೆಹ್ತಾ, ಟೆಲಿಗ್ರಾಂನ ವಿಶಿಷ್ಟ ಫೀಚರ್‌ಗಳು ದೊಡ್ಡ ಮಟ್ಟದಲ್ಲಿ ಕಾನೂನುಬಾಹಿರ ಮಾಹಿತಿಯನ್ನು ಹರಡಲು ಹೇಗೆ ಬಳಕೆಯಾಗುತ್ತಿವೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಿದರು.
ಟೆಲಿಗ್ರಾಂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ನಾವು ಆರೋಪಿಸುತ್ತಿಲ್ಲ, ಆದರೆ ಸರ್ಕಾರ ಸೂಚಿಸಿದ ಕ್ರಮಗಳನ್ನು ಆ್ಯಪ್ ಪಾಲಿಸಿದ್ದರೂ ಅಧಿಕಾರಿಗಳು ಎತ್ತಿರುವ ಭದ್ರತಾ ಕಳವಳಗಳನ್ನು ಬಗೆಹರಿಸುವಲ್ಲಿ ಆ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬಾಟ್ ನೆಟ್‌ವರ್ಕ್ ಜಾಲ ಮತ್ತು ಅಪರಾಧಿಗಳ ಪತ್ತೆಗೆ ಸವಾಲು
ಟೆಲಿಗ್ರಾಂನಲ್ಲಿರುವ ಬೋಟ್ ವ್ಯವಸ್ಥೆಯು ಒಮ್ಮೆಲೇ ಭಾರಿ ಪ್ರಮಾಣದ ಮಾಹಿತಿಯನ್ನು ಹಂಚಲು (Bulk dissemination) ಅನುವು ಮಾಡಿಕೊಡುತ್ತದೆ ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಒಬ್ಬನೇ ಬಳಕೆದಾರ ಬರೋಬ್ಬರಿ 40 ಬಾಟ್‌ಗಳನ್ನು ರಚಿಸಬಹುದಾಗಿದ್ದು, ಇವುಗಳು ಮಾನವನ ಹಸ್ತಕ್ಷೇಪವಿಲ್ಲದೆಯೇ ಬೃಹತ್ ಸ್ವಯಂಚಾಲಿತ ನೆಟ್‌ವರ್ಕ್‌ಗಳನ್ನು ಸೃಷ್ಟಿಸುತ್ತವೆ. ಇಂತಹ ವಿಶಿಷ್ಟ ಫೀಚರ್ ಇತರ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಇಲ್ಲದಿರುವುದು ಈ ಆ್ಯಪ್‌ನ ದುರ್ಬಳಕೆಗೆ ಪ್ರಮುಖ ಕಾರಣವಾಗಿದೆ.
ಇದರ ಜೊತೆಗೆ, ಟೆಲಿಗ್ರಾಂ ಸಂಪೂರ್ಣವಾಗಿ ಕ್ಲೌಡ್-ಆಧಾರಿತ (Cloud-based) ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುವುದರಿಂದ, ಕಾನೂನುಬಾಹಿರ ಚಟುವಟಿಕೆಗಳ ಹಿಂದೆ ಇರುವ ನೈಜ ಬಳಕೆದಾರರನ್ನು ಪತ್ತೆಹಚ್ಚುವುದು ಕಾನೂನು ಜಾರಿ ಸಂಸ್ಥೆಗಳಿಗೆ ಅತ್ಯಂತ ಕಷ್ಟಕರವಾಗಿದೆ. ಆ್ಯಪ್ ಖಾತೆಯನ್ನು ಬ್ಲಾಕ್ ಮಾಡಿದರೂ, ಅದರ ಹಿಂದಿರುವ ಸೂತ್ರಧಾರನನ್ನು ಪತ್ತೆ ಹಚ್ಚುವುದು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ಟೈಮ್‌ಸ್ಟ್ಯಾಂಪ್ ಇಲ್ಲದ ಎಡಿಟಿಂಗ್ ಫೀಚರ್ ಮತ್ತು ಉಗ್ರರ ದುರ್ಬಳಕೆ
ಟೆಲಿಗ್ರಾಂನ ‘ಮೆಸೇಜ್ ಎಡಿಟಿಂಗ್’ ಫೀಚರ್ ಬಗ್ಗೆ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಆ್ಯಪ್‌ನಲ್ಲಿ ಸಂದೇಶವನ್ನು ಎಡಿಟ್ ಮಾಡಿದಾಗ ‘ಟೈಮ್‌ಸ್ಟ್ಯಾಂಪ್’ (ಸಮಯ ಮತ್ತು ದಿನಾಂಕ) ಸಾರ್ವಜನಿಕವಾಗಿ ಕಾಣಿಸುವುದಿಲ್ಲ. ಉದಾಹರಣೆಗೆ, ಜೂನ್ 21 ರಂದು ಪ್ರಶ್ನೆಪತ್ರಿಕೆ ಲೀಕ್ ಆಗಿದ್ದರೆ, ಯಾರಾದರೂ ಜೂನ್ 22 ರಂದು ಅದನ್ನು ಅಪ್‌ಲೋಡ್ ಮಾಡಿ, ಬಳಿಕ ದಿನಾಂಕ ಮತ್ತು ಸಮಯವನ್ನು ಜೂನ್ 18 ಎಂದು ಎಡಿಟ್ ಮಾಡಿ ಜನರನ್ನು ಹಾದಿ ತಪ್ಪಿಸಬಹುದು. 2024 ರ ನೀಟ್ ವಿವಾದದ ವೇಳೆಯೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತು ಎಂದು ಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದರು.
ಅಲ್ಲದೆ, ಟೆಲಿಗ್ರಾಂನ ವಿನ್ಯಾಸ ಮತ್ತು ಫೀಚರ್‌ಗಳಿಂದಾಗಿ ಇದು ಭಯೋತ್ಪಾದಕ ಚಟುವಟಿಕೆಗಳಿಗೆ ಅತಿ ಹೆಚ್ಚು ಬಳಕೆಯಾಗುತ್ತಿರುವ ನೆಚ್ಚಿನ ವೇದಿಕೆಯಾಗಿದೆ ಎಂದು ಸರ್ಕಾರಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕಾಗಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಟೆಲಿಗ್ರಾಂ ಕಾನೂನು ಮತ್ತು ನಿಯಂತ್ರಣದ ಸವಾಲುಗಳನ್ನು ಎದುರಿಸುತ್ತಿದೆ.
ಟೆಲಿಗ್ರಾಂ ಸಂಸ್ಥೆಯ ಪ್ರತಿವಾದ
ಮತ್ತೊಂದೆಡೆ, ಸರ್ಕಾರದ ಈ ನಿಷೇಧದ ಕ್ರಮವನ್ನು ಟೆಲಿಗ್ರಾಂ ಪರ ವಕೀಲರು ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದ್ದಾರೆ. ಜೂನ್ 1 ರಿಂದ ಸರ್ಕಾರ ನೀಡಿದ ಎಲ್ಲಾ ನಿಯಮಗಳು ಹಾಗೂ ನಿರ್ದೇಶನಗಳನ್ನು ತಾವು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ ಎಂದು ಸಂಸ್ಥೆ ವಾದಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ಮತ್ತು ಚಾನೆಲ್‌ಗಳನ್ನು ಈಗಾಗಲೇ ವೇದಿಕೆಯಿಂದ ಸಂಪೂರ್ಣವಾಗಿ ಡಿಲೀಟ್ ಮಾಡಲಾಗಿದೆ. ಹೀಗಿದ್ದೂ ಕೇವಲ ಕೆಲವು ಉಲ್ಲಂಘನೆಗಳನ್ನು ಮುಂದಿಟ್ಟುಕೊಂಡು ಇಡೀ ಆ್ಯಪ್ ಅನ್ನು ಬ್ಯಾನ್ ಮಾಡುವುದು ಸೂಕ್ತವಲ್ಲ. ಇದು ಭಾರತದಲ್ಲಿರುವ 15 ಕೋಟಿಗೂ (150 ಮಿಲಿಯನ್) ಅಧಿಕ ಟೆಲಿಗ್ರಾಂ ಬಳಕೆದಾರರಿಗೆ ಮಾಡುವ ಅನ್ಯಾಯ ಹಾಗೂ ಅಸಮರ್ಪಕ ಕ್ರಮವಾಗಿದೆ ಎಂದು ಟೆಲಿಗ್ರಾಂ ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
