ಬೆಂಗಳೂರು: ಬಾಡಿಗೆದಾರರು ಟಿವಿ ನೋಡುವ ನೆಪದಲ್ಲಿ ಮನೆ ಮಾಲಕಿಯನ್ನೇ ಕೊಂದು (murder) , ಚಿನ್ನದ ಸರ ದೋಚಿರುವ ಘಟನೆ ಉತ್ತರಹಳ್ಳಿಯಲ್ಲಿ ನಡೆದಿದೆ.
ಹೌದು, ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾದ ಶ್ರೀಲಕ್ಷ್ಮಿ (65) ಅವರ ಮನೆಯಲ್ಲಯೇ ಬಾಡಿಗೆಯಲ್ಲಿದ್ದ ಪ್ರಸಾದ್ ಶ್ರೀಶೈಲ ಮಕಾಯ್ ಮತ್ತು ಸಾಕ್ಷಿ ಹಣಮಂತ ಹೊದ್ಲೂರು ಎಂಬ ದಂಪತಿಗಳು ಈ ಹೀನ ಕೃತ್ಯವನ್ನು ಎಸಗಿದ್ದಾರೆ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಸುಬ್ರಮಣ್ಯಪುರ (Subramanyapura)ಠಾಣೆಯ ಇನ್ಸ್‌ಪೆಕ್ಟರ್ ರಾಜು ಅವರ ನೇತೃತ್ವದ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ. ಇವರಿಬ್ಬರು ನಾಲ್ಕು ತಿಂಗಳ ಹಿಂದೆ ಸೋಲಾಪುರ (Maharashtra) ಮೂಲದಿಂದ ಕೆಲಸ ಹುಡುಕಿಕೊಂಡು ಬಂದಿದ್ದರು. ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಬಾಡಿಗೆಯಲ್ಲಿ ವಾಸಿಸುತ್ತಿದ್ದ ಇವರಿಬ್ಬರು, ಆರ್ಥಿಕ ಸಂಕಷ್ಟ ಮತ್ತು ಸಾಲದ ಒತ್ತಡದಿಂದ ಕಳ್ಳತನಕ್ಕೆ ಮುಂದಾಗಿದ್ದಾರೆಂದು ತನಿಖೆಯಿಂದ ತಿಳಿದುಬಂದಿದೆ.
ಮೃತೆಯ ಪತಿ ಅಶ್ವತ್ಥನಾರಾಯಣ್ ಕೆಲಸಕ್ಕೇಂದು ಪ್ರತಿದಿನ ಬೆಳಿಗ್ಗೆ ಕಾಟನ್‌ಪೇಟೆಯ ಅಗರಬತ್ತಿ ಕಾರ್ಖಾನೆಗೆ ತೆರಳಿ ಸಂಜೆ ವಾಪಸ್ ಆಗುತ್ತಿದ್ದರು. ಆ ವೇಳೆ ಲಕ್ಷ್ಮಿ ಮನೆಯಲ್ಲಿ ಏಕಾಂಗಿಯಾಗಿರುವುದನ್ನು ಗಮನಿಸಿದ ಪ್ರಸಾದ್ ದಂಪತಿ, “ಹೊಸ ಟಿವಿ ಖರೀದಿಸಬೇಕು, ನಿಮ್ಮ ಟಿವಿ ನೋಡೋಣ” ಎಂದು ನೆಪ ಹೇಳಿ ಒಳಗೆ ಪ್ರವೇಶಿಸಿದ್ದರು. ನಂತರ ಮಾತುಕತೆ ನಡುವೆ ಉಸಿರುಗಟ್ಟಿಸಿ ಹತ್ಯೆಗೈದು ಚಿನ್ನದ ಸರ ದೋಚಿ ಪರಾರಿಯಾಗಿದ್ದರು.
ಹತ್ಯೆ ಸಂದರ್ಭದಲ್ಲಿ ಪ್ರತಿರೋಧಿಸಿದ ಲಕ್ಷ್ಮಿಗೆ ಕುತ್ತಿಗೆ, ತುಟಿ ಮತ್ತು ಮುಖದಲ್ಲಿ ಗಾಯಗಳ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿಗಳಿಂದ ದೋಚಿದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
