ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಸಂಜೆ ವೇಳೆ ತೋಟಕ್ಕೆ ವಾಕಿಂಗ್‌ಗೆಂದು ತೆರಳಿದ್ದ ವೃದ್ಧೆಯೊಬ್ಬರನ್ನು ಹಂತಕರು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ವೃದ್ಧೆಯ ಕೈಕಾಲುಗಳನ್ನು ಕಟ್ಟಿ, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.
ಕೊರಟಗೆರೆ ತಾಲ್ಲೂಕಿನ ಸಿಎನ್ ದುರ್ಗ ಹೋಬಳಿಯ ದಾಸಲುಕುಂಟೆ ಗ್ರಾಮದ ನಿವಾಸಿ ರತ್ನಮ್ಮ (74) ಕೊಲೆಯಾದ ದುರ್ದೈವಿ ವೃದ್ಧೆ. ಕಳೆದ ಮೂರು ವರ್ಷಗಳ ಹಿಂದೆ ಪತಿ ಮುದ್ದಬಸಪ್ಪ ಅವರನ್ನು ಕಳೆದುಕೊಂಡಿದ್ದ ರತ್ನಮ್ಮ, ಅಂದಿನಿಂದ ತಮ್ಮ ಸೊಸೆ ಭಾಗ್ಯಮ್ಮ ಅವರ ಜೊತೆ ವಾಸವಾಗಿದ್ದರು. ಪ್ರತಿದಿನ ಸಂಜೆ ತೋಟದ ಕಡೆಗೆ ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ ರತ್ನಮ್ಮ, ನಿನ್ನೆ ಸಂಜೆಯೂ ಎಂದಿನಂತೆ ವಾಕಿಂಗ್ ತೆರಳಿದ್ದರು. ಆದರೆ ರಾತ್ರಿಯಾದರೂ ಅವರು ಮನೆಗೆ ವಾಪಸ್ ಬಾರದಿದ್ದಾಗ ಅನುಮಾನಗೊಂಡ ಸೊಸೆ ಭಾಗ್ಯಮ್ಮ ಹಾಗೂ ಗ್ರಾಮಸ್ಥರು ಸುತ್ತಮುತ್ತ ಇಡೀ ರಾತ್ರಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ತೋಟದ ಮನೆಯ ಬಳಿ ರತ್ನಮ್ಮ ಅವರ ಮೃತದೇಹ ಪತ್ತೆಯಾಗಿದೆ.
ಹಂತಕರು ವೃದ್ಧೆಯ ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ಸುತ್ತಿ ಭೀಕರವಾಗಿ ಕೊಲೆ ಮಾಡಿದ್ದಾರೆ. ರತ್ನಮ್ಮ ಅವರು ಧರಿಸಿದ್ದ ಮೈಮೇಲಿನ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದಲೇ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧೆಯನ್ನು ಬಲಿಪಡೆದ ಕ್ರೂರಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
