ಮುಂಬೈ: ನಿರ್ದೇಶಕ ರೋಹಿತ್ ಶೆಟ್ಟಿ ಮುಂಬೈ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಮತ್ತು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಫೆಬ್ರವರಿ 1ರಂದು ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅವರ ಮನೆಯ ಬಾಲ್ಕನಿಯ ಗಾಜಿಗೆ ಹಾನಿಯಾಗಿತ್ತು.
ಚಿತ್ರರಂಗದಲ್ಲಿ ಭೀತಿ ಹುಟ್ಟಿಸಲು ಮತ್ತು ಹಣ ಸುಲಿಗೆ ಮಾಡುವ ಉದ್ದೇಶದಿಂದ ಕುಖ್ಯಾತ ಶುಭಂ ಲೋಂಕರ್ ಗ್ಯಾಂಗ್ ಈ ಕೃತ್ಯ ಎಸಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶದ ಆಗ್ರಾ ನಿವಾಸಿ ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆಗ್ರಾದ ಅಶೋಕ್ ನಗರದಲ್ಲಿ ಗುರುವಾರ ಸಂಜೆ 3.56ಕ್ಕೆ ಈತನನ್ನು ಸೆರೆಹಿಡಿಯಲಾಗಿದೆ.
ಪ್ರಾಥಮಿಕ ವಿಚಾರಣೆಯ ವೇಳೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಲೋಂಕರ್ ಗ್ಯಾಂಗ್‌ನ ಸಂಪರ್ಕಕ್ಕೆ ಬಂದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಭೂಗತ ಲೋಕದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ಸನ್ನಿ, ದೀಪು ಮತ್ತು ಸೋನು ಎಂಬ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿರುವುದಾಗಿ ಆತ ತಿಳಿಸಿದ್ದಾನೆ.
