ತೀರ್ಥಹಳ್ಳಿ: ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಮಹಿಷಿ ಉತ್ತರಾಧಿ ಮಠದಲ್ಲಿ ಮತ್ತೊಮ್ಮೆ ಕಳವು ಪ್ರಕರಣ ಬೆಳಕಿಗೆ ಬಂದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮಹಿಷಿ ಮಠದ ಐತಿಹಾಸಿಕ ಹಿನ್ನೆಲೆ
ತುಂಗಾ ನದಿಯ ದಡದಲ್ಲಿರುವ ಮಹಿಷಿ ಉತ್ತರಾಧಿ ಮಠವು ಉತ್ತರಾಧಿ ಮಠದ ಅತ್ಯಂತ ಪವಿತ್ರ ಶಾಖೆಗಳಲ್ಲಿ ಒಂದಾಗಿದೆ. ಮಧ್ವ ಪರಂಪರೆಯ ಪ್ರಖ್ಯಾತ ಯತಿಗಳಲ್ಲಿ ಒಬ್ಬರಾದ ಉತ್ತರಾಧಿ ಮಠದ 26ನೇ ಪೀಠಾಧಿಪತಿ ಶ್ರೀ ಸತ್ಯಸಂಧ ತೀರ್ಥರ ಮೂಲ ಬೃಂದಾವನ ಇಲ್ಲಿರುವುದು ಈ ಮಠದ ವಿಶೇಷತೆಯಾಗಿದೆ. ಪ್ರತಿದಿನ ನೂರಾರು ಭಕ್ತರು ಭೇಟಿ ನೀಡುವ ಈ ಧಾರ್ಮಿಕ ಕೇಂದ್ರದಲ್ಲಿ ನಡೆದಿರುವ ಕಳವು ಪ್ರಕರಣ ಭಕ್ತರಲ್ಲಿ ತೀವ್ರ ಆತಂಕ ಮೂಡಿಸಿದೆ.
ನಾಪತ್ತೆಯಾದ ಆಭರಣಗಳ ವಿವರ
ಮಠದ ಮೂಲಗಳ ಪ್ರಕಾರ, ಭಾರಿ ಮೌಲ್ಯದ ಚಿನ್ನದ ಹಲಗಾರತಿಗಳು ಕಳುವಾಗಿವೆ. ಸುಮಾರು 50 ಗ್ರಾಂ ತೂಕದ ಒಟ್ಟು 15 ಚಿನ್ನದ ಹಲಗಾರತಿಗಳು ನಾಪತ್ತೆಯಾಗಿದ್ದು, ಇವುಗಳ ಒಟ್ಟು ತೂಕ 750 ಗ್ರಾಂ ಎಂದು ಲೆಕ್ಕಹಾಕಲಾಗಿದೆ. ಕಳುವಾದ ಈ ಸಂಪೂರ್ಣ ಚಿನ್ನಾಭರಣದ ಪ್ರಾಥಮಿಕ ಅಂದಾಜು ಮೌಲ್ಯ ಒಂದು ಕೋಟಿ ರೂಪಾಯಿಗೂ ಅಧಿಕವಾಗಿರಬಹುದು ಎಂದು ಹೇಳಲಾಗುತ್ತಿದೆ.
2025ರ ದರೋಡೆ ಪ್ರಕರಣದ ಕರಾಳ ನೆನಪು
ಇದೇ ಮಠದಲ್ಲಿ 2025ರ ಏಪ್ರಿಲ್ 5ರಂದು ಭಾರಿ ದರೋಡೆ ಪ್ರಕರಣ ನಡೆದಿತ್ತು. ಮಠದಲ್ಲಿ ಸುಮಾರು 300 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ 12 ರಿಂದ 15 ಮಂದಿಯ ತಂಡ ದರೋಡೆಗೆ ಯತ್ನಿಸಿತ್ತು. ಆ ಸಂದರ್ಭದಲ್ಲಿ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಸೇರಿದಂತೆ ಸುಮಾರು 1.16 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕೊಂಡೊಯ್ಯಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ತನಿಖೆ ವೇಳೆ ಪ್ರಮುಖ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಭದ್ರತಾ ಲೋಪದ ಬಗ್ಗೆ ಅನುಮಾನ
ಹಿಂದಿನ ಘಟನೆಯ ಬಳಿಕ ಮಠದ ಭದ್ರತೆ ಹೆಚ್ಚಿಸಲು ಹಾಗೂ ಸುತ್ತ ಕಾಂಪೌಂಡ್ ನಿರ್ಮಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಆದರೆ ಭದ್ರತಾ ವ್ಯವಸ್ಥೆಯಲ್ಲಿ ಇನ್ನೂ ಲೋಪಗಳಿರುವುದೇ ಈ ಕಳುವಿಗೆ ಪ್ರಮುಖ ಕಾರಣವೇ ಎಂಬ ಗಂಭೀರ ಪ್ರಶ್ನೆ ಈಗ ಉದ್ಭವಿಸಿದೆ. ಕಳುವಿನ ಹಿಂದೆ ಹೊರಗಿನಿಂದ ಬಂದ ಕಳ್ಳರ ಕೈವಾಡವಿದೆಯೇ ಅಥವಾ ಮಠದ ಒಳವಲಯದವರ ಪಾತ್ರವಿದೆಯೇ ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಚುರುಕಿನ ತನಿಖೆ ಆರಂಭಿಸಿದ್ದಾರೆ
