ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಲಂಚಾವತಾರ ಜಗಜ್ಜಾಹೀರಾಗಿದೆ. ಲೇಔಟ್ ನಕ್ಷೆ ಅನುಮೋದನೆಗಾಗಿ ವ್ಯಕ್ತಿಯೊಬ್ಬರಿಂದ ರಾಜಾರೋಷವಾಗಿ ಲಂಚಕ್ಕೆ ಬೇಡಿಕೆಯಿಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಸಂಚಲನ ಸೃಷ್ಟಿಸಿದೆ.
ಲಿಂಗಸುಗೂರು ತಾಲೂಕು ಟೌನ್ ಪ್ಲಾನಿಂಗ್ ಅಧಿಕಾರಿ ಶರಣಪ್ಪ ಮಡಿವಾಳರ ಎಂಬಾತನೇ ವಿಡಿಯೋದಲ್ಲಿ ಸಿಕ್ಕಿಬಿದ್ದಿರುವ ಭ್ರಷ್ಟ ಅಧಿಕಾರಿಯಾಗಿದ್ದಾನೆ.
ವಿಡಿಯೋದಲ್ಲಿ ಅಧಿಕಾರಿ ಶರಣಪ್ಪ ಲೇಔಟ್ ಒಂದರ ಮ್ಯಾಪ್ ಪಾಸ್ ಮಾಡಿಕೊಡಲು ಬರೋಬ್ಬರಿ 3,60,000 ರೂಪಾಯಿಗಳ ಲಂಚಕ್ಕೆ ಬೇಡಿಕೆಯಿಟ್ಟಿರುವುದು ಸ್ಪಷ್ಟವಾಗಿ ಸೆರೆಯಾಗಿದೆ. ಇದರಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, “ಈ ಲಂಚದ ಹಣದಲ್ಲಿ ಮಿನಿಸ್ಟರ್ (ಸಚಿವರಿಗೂ) ಪಾಲು ನೀಡಬೇಕು” ಎಂದು ಅಧಿಕಾರಿ ನಿರ್ಭೀತಿಯಿಂದ ಬಾಯ್ಬಿಟ್ಟಿರುವುದು. ಹಣದ ಚೌಕಾಸಿ ನಡೆಯುವಾಗ ಕಚೇರಿಯ ಸಿಬ್ಬಂದಿ ಒಳಬಂದರೂ, ಅವರನ್ನು ದಬಾಯಿಸಿ ಹೊರಗಟ್ಟಿ ತಮ್ಮ ಭ್ರಷ್ಟ ಡೀಲ್ ಮುಂದುವರಿಸಿರುವುದು ಈ ಅಧಿಕಾರಿಯ ಹಣದಾಸೆಯನ್ನು ಎತ್ತಿತೋರಿಸುತ್ತಿದೆ.
ನಿಯಮಗಳ ಪ್ರಕಾರ ಯಾವುದೇ ಹೊಸ ಲೇಔಟ್‌ಗಳಲ್ಲಿ ಸಾರ್ವಜನಿಕ ರಸ್ತೆ, ಚರಂಡಿ, ಉದ್ಯಾನವನ ಹಾಗೂ ಬೀದಿ ದೀಪಗಳಿಗೆ ಕಡ್ಡಾಯವಾಗಿ ಜಾಗ ಬಿಟ್ಟು ನಕ್ಷೆ ತಯಾರಿಸಬೇಕು. ಆದರೆ, ತಮಗೆ ಲಂಚ ಕೊಟ್ಟರೆ ಬಿಲ್ಡರ್‌ಗಳಿಗೆ ಅನುಕೂಲವಾಗುವಂತೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಮ್ಯಾಪ್ ಮಾಡಿಕೊಡುವುದಾಗಿ ಈ ಅಧಿಕಾರಿ ಭರವಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಲಂಚದ ಮೊತ್ತವನ್ನು ಕೊಂಚ ಕಡಿಮೆ ಮಾಡುವಂತೆ ವ್ಯಕ್ತಿ ಬೇಡಿಕೊಂಡಾಗ, ಕನಿಷ್ಠ ಇಷ್ಟಾದರೂ ಕೊಡಲೇಬೇಕು ಎಂದು ಕ್ಯಾಲ್ಕುಲೇಟರ್‌ನಲ್ಲಿ ಲೆಕ್ಕ ಹಾಕಿ ತೋರಿಸುತ್ತಿರುವ ಈ ವೈರಲ್ ವಿಡಿಯೋ ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಈ ಭ್ರಷ್ಟ ಅಧಿಕಾರಿಯನ್ನು ಅಮಾನತುಗೊಳಿಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
