ಮೈಸೂರು: ಮದುವೆ ನಿಶ್ಚಯವಾಗಿದ್ದ ಯುವತಿಗೆ ಹಾಗೂ ಆಕೆಯ ಕುಟುಂಬಕ್ಕೆ ಯುವಕನೊಬ್ಬ ನೀಡಿದ ನಿರಂತರ ಮಾನಸಿಕ ಕಿರುಕುಳಕ್ಕೆ ಮೂರು ಜೀವಗಳು ಬಲಿಯಾಗಿವೆ. ಡೆತ್‌ನೋಟ್ ಬರೆದಿಟ್ಟು ತಂದೆ, ತಾಯಿ ಹಾಗೂ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧೃತ ಜನಕ ಘಟನೆ ಟಿ.ನರಸೀಪುರ (T Narsipura) ತಾಲೂಕಿನ ಕೆಂಪಯ್ಯನ ಹುಂಡಿ (Kempaiyanahundi) ಗ್ರಾಮದಲ್ಲಿ ನಡೆದಿದೆ.
ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಹಾಗೂ ಮಗಳು ರಕ್ಷಿತಾ (21) ಮೃತ ದುರ್ದೈವಿಗಳು. ತಮ್ಮ ಸಾವಿಗೆ ಉಲ್ಲಾಸ್ ಗೌಡ (Ullas Gowda) ಎಂಬಾತನೇ ನೇರ ಕಾರಣ ಎಂದು ಮೂವರೂ ಡೆತ್‌ನೋಟ್‌ನಲ್ಲಿ (Death Note) ಉಲ್ಲೇಖಿಸಿದ್ದಾರೆ.
ಮೃತ ರಕ್ಷಿತಾಗೆ ಮೂರು ತಿಂಗಳ ಹಿಂದೆಯಷ್ಟೇ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಇದೇ ತಿಂಗಳ 23-24ರಂದು ವಿವಾಹ ನಿಗದಿಯಾಗಿತ್ತು. ಆದರೆ, ವಾರದ ಹಿಂದಷ್ಟೇ ಉಲ್ಲಾಸ್ ಗೌಡ, ರಕ್ಷಿತಾಳನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿ ಮದುವೆ ಮಾಡಿಕೊಡುವಂತೆ ಪೋಷಕರ ಬಳಿ ಗಲಾಟೆ ಮಾಡಿದ್ದ. ಗ್ರಾಮದ ಹಿರಿಯರು ಸೇರಿ ಪಂಚಾಯತಿ ಮಾಡಿ ಬುದ್ಧಿವಾದ ಹೇಳಿದ್ದರೂ ಆತ ಕೇಳಿರಲಿಲ್ಲ.
ಇದಾದ ಬಳಿಕ, ಈ ಹಿಂದೆ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್ ಹಾಗೂ ಫೋಟೋಗಳನ್ನು ಇಟ್ಟುಕೊಂಡು ಉಲ್ಲಾಸ್ ನಿರಂತರವಾಗಿ ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಅಷ್ಟಕ್ಕೇ ನಿಲ್ಲದೆ, ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೂ ಆ ಫೋಟೋ ಹಾಗೂ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಇದರಿಂದ ತೀವ್ರ ಅವಮಾನಕ್ಕೊಳಗಾದ ಕುಟುಂಬಸ್ಥರು ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ವರುಣಾ ಠಾಣೆ ಪೊಲೀಸರು (Varuna Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
