S Shorts

‘ಶಕ್ತಿಮಾನ್ ಸೇಲ್ ಆಗಿದ್ದಾರೆ’: ಸಮಯ್ ರೈನಾಗೆ ಬೈದಿದ್ದ ಮುಖೇಶ್ ಖನ್ನಾ ಈಗ ಅದೇ Comedian ಜೊತೆ ಜಾಹೀರಾತಿನಲ್ಲಿ ಭಾಗಿ!

‘ಶಕ್ತಿಮಾನ್ ಸೇಲ್ ಆಗಿದ್ದಾರೆ’: ಸಮಯ್ ರೈನಾಗೆ ಬೈದಿದ್ದ ಮುಖೇಶ್ ಖನ್ನಾ ಈಗ ಅದೇ Comedian ಜೊತೆ ಜಾಹೀರಾತಿನಲ್ಲಿ ಭಾಗಿ!
Author: Sagaradventure
Posted By: Sagaradventure
Updated: Jun 22, 2026 | 2:42 PM

ಈ ವರ್ಷದ ಏಪ್ರಿಲ್‌ನಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದದ ಸಂದರ್ಭದಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ‘ಶಕ್ತಿಮಾನ್’ ಖ್ಯಾತಿಯ ನಟ ಮುಖೇಶ್ ಖನ್ನಾ, ಇದೀಗ ಅದೇ ಸಮಯ್ ರೈನಾ ಜೊತೆ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಮುಖೇಶ್ ಖನ್ನಾ ಅವರು ಈ ಹಿಂದೆ ಆ ಕಾಮಿಡಿ ಕಾರ್ಯಕ್ರಮವನ್ನು ‘ಅಶ್ಲೀಲ’ ಎಂದು ಜರಿದಿದ್ದಲ್ಲದೆ, ಸಮಯ್ ರೈನಾನನ್ನು ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಕು, ಆತನ ಮುಖಕ್ಕೆ ಮಸಿ ಬಳಿಯಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕೇವಲ ಕೆಲವೇ ತಿಂಗಳುಗಳ ಅಂತರದಲ್ಲಿ ಅವರಿಬ್ಬರೂ ಒಟ್ಟಾಗಿ ಸ್ಮಾರ್ಟ್‌ಫೋನ್ ಜಾಹೀರಾತಿನಲ್ಲಿ ನಟಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸೋಮವಾರ ಸಮಯ್ ರೈನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘Ai+ ಸ್ಮಾರ್ಟ್‌ಫೋನ್’ ಜಾಹೀರಾತಿನ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಮಯ್ ಫೋನ್‌ನಲ್ಲಿ ಮಾತನಾಡುತ್ತಾ, “ಶೋ ಮತ್ತೆ ಶುರುವಾಗುತ್ತಿದೆ, ಕತ್ತಲೆ ಹೆಚ್ಚು ಕಾಲ ಉಳಿಯುವುದಿಲ್ಲ” ಎನ್ನುತ್ತಾರೆ. ತಕ್ಷಣವೇ ಶಕ್ತಿಮಾನ್ ಗೆಟಪ್‌ನಲ್ಲಿ ಮುಖೇಶ್ ಖನ್ನಾ ಎಂಟ್ರಿ ಕೊಡುತ್ತಾರೆ. “ನೀವಿಲ್ಲಿ ಏನ್ ಮಾಡ್ತಿದ್ದೀರಾ?” ಎಂಬ ಸಮಯ್ ಪ್ರಶ್ನೆಗೆ, “ನಿನ್ನ ಡೊಂಕು ಬಾಲವನ್ನು ಸರಿಮಾಡಲು ಬಂದಿದ್ದೇನೆ” ಎಂದು ಮುಖೇಶ್ ಉತ್ತರಿಸುತ್ತಾರೆ. ಅಲ್ಲದೆ, “3 ಎಫ್‌ಐಆರ್ (FIR) ದಾಖಲಾದರೂ ನೀನು ಸುಧಾರಿಸಿಲ್ಲ, ನಿನ್ನ ಮುಖಕ್ಕೆ ಮಸಿ ಬಳಿಯಲೇಬೇಕು. ನಿನ್ನ ಅಶ್ಲೀಲ ಹಾಗೂ ಅಮೆರಿಕನ್ ಶೈಲಿಯ ಜೋಕ್‌ಗಳಿಂದ ಜನರ ಮೆದುಳು ಕೆಟ್ಟುಹೋಗಿದೆ” ಎಂದು ಡೈಲಾಗ್ ಹೊಡೆಯುತ್ತಾರೆ. ಕೊನೆಯಲ್ಲಿ ಸಮಯ್ ತಾವು ಬಳಸುತ್ತಿರುವ ಸ್ಮಾರ್ಟ್‌ಫೋನ್ ಮೇಡ್-ಇನ್-ಇಂಡಿಯಾ ಎಂದು ತೋರಿಸಿ ಮುಖೇಶ್ ಅವರನ್ನು ಸಮಾಧಾನಪಡಿಸುವ ಮೂಲಕ ಜಾಹೀರಾತು ಅಂತ್ಯವಾಗುತ್ತದೆ.

ಈ ಅನಿರೀಕ್ಷಿತ ಜಾಹೀರಾತು ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದು, ಮುಖೇಶ್ ಖನ್ನಾ ಅವರ ದ್ವಂದ್ವ ನಿಲುವಿನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. “ಶಕ್ತಿಮಾನ್ ಕೂಡ ಬಿಕರಿಯಾಗಿದ್ದಾರೆ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. “ಹಣಕ್ಕಾಗಿ ಶಕ್ತಿಮಾನ್ ತಮ್ಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಮಾರಿಕೊಂಡಿದ್ದಾರಾ?” ಎಂದು ಮತ್ತೊಬ್ಬರು ನೇರವಾಗಿ ಪ್ರಶ್ನಿಸಿದ್ದಾರೆ. ಸಮಯ್ ರೈನಾ ತಮ್ಮ ವಿರೋಧಿಗಳನ್ನೂ ಜಾಹೀರಾತುಗಳ ಮೂಲಕ ಒಲಿಸಿಕೊಳ್ಳುತ್ತಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

ಒಟ್ಟಿನಲ್ಲಿ ಕೇವಲ ಕೆಲವು ತಿಂಗಳ ಹಿಂದಷ್ಟೇ ಸಮಯ್ ರೈನಾ ಭಾರತೀಯ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದ ಮುಖೇಶ್ ಖನ್ನಾ, ಈಗ ಅದೇ ವ್ಯಕ್ತಿಯ ಜೊತೆ ನಗುತ್ತಾ ಜಾಹೀರಾತಿನಲ್ಲಿ ನಟಿಸುವ ಮೂಲಕ ಹಣಕ್ಕಾಗಿ ತಮ್ಮ ತತ್ವಗಳನ್ನು ಗಾಳಿಗೆ ತೂರಿದ್ದಾರೆ ಎಂದು ಎಕ್ಸ್ (X) ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.