S Shorts

ಚಾರಣಿಗರಿಗೆ ಬಿಗ್ Alert: ನೇಚರ್ ಗೈಡ್ ಇಲ್ಲದೆ Trekkingಗೆ ಬ್ರೇಕ್, ಅರಣ್ಯ ಇಲಾಖೆಯಿಂದ ಕಠಿಣ ನಿಯಮ ಜಾರಿ!

ಚಾರಣಿಗರಿಗೆ ಬಿಗ್ Alert: ನೇಚರ್ ಗೈಡ್ ಇಲ್ಲದೆ Trekkingಗೆ ಬ್ರೇಕ್, ಅರಣ್ಯ ಇಲಾಖೆಯಿಂದ ಕಠಿಣ ನಿಯಮ ಜಾರಿ!
Author: Sagaradventure
Posted By: Sagaradventure
Updated: Apr 17, 2026 | 1:03 PM

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದ್ದು, ಕಠಿಣ ನಿಯಮಗಳನ್ನೊಳಗೊಂಡ ನೂತನ ಮಾರ್ಗಸೂಚಿಯನ್ನು (SOP) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಬಿಡುಗಡೆ ಮಾಡಿದ್ದಾರೆ.

ಹೊಸ ನಿಯಮಾವಳಿಗಳ ಪ್ರಕಾರ, ಇನ್ನು ಮುಂದೆ ಕಡ್ಡಾಯವಾಗಿ ಸ್ಥಳೀಯ ‘ನೇಚರ್ ಗೈಡ್’ (ಪ್ರಕೃತಿ ಮಾರ್ಗದರ್ಶಕರು) ಇಲ್ಲದೆ ಅರಣ್ಯ ಇಲಾಖೆಯ ಯಾವುದೇ ಚಾರಣ ಪಥಗಳಲ್ಲಿ ಟ್ರೆಕ್ಕಿಂಗ್ ನಡೆಸಲು ಅವಕಾಶವಿರುವುದಿಲ್ಲ. ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಹಾಗೂ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ಚಾರಣಿಗರು ನಾಪತ್ತೆಯಾಗಿದ್ದ ಅಹಿತಕರ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಚಾರಣದ ಮೇಲಿನ ನಿಯಂತ್ರಣ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪ್ರತಿ ಹತ್ತು ಜನ ಚಾರಣಿಗರ ತಂಡಕ್ಕೆ ಒಬ್ಬ ಗೈಡ್ ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಒಂದು ಚಾರಣ ಪಥದಲ್ಲಿ ದಿನವೊಂದಕ್ಕೆ ಗರಿಷ್ಠ 150 ಜನರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಚಾರಣಕ್ಕೆ ತೆರಳುವ ಪ್ರತಿಯೊಬ್ಬರೂ ‘ಅರಣ್ಯ ವಿಹಾರ‘ ವೆಬ್‌ಸೈಟ್ ಮೂಲಕ ಮುಂಗಡವಾಗಿ ಆನ್‌ಲೈನ್ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯವಾಗಿದೆ.

ಚಾರಣ ಆರಂಭಿಸುವ ಮುನ್ನ ಬೇಸ್ ಕ್ಯಾಂಪ್‌ನಲ್ಲಿ ಅರಣ್ಯದ ಪರಿಸ್ಥಿತಿ ಹಾಗೂ ವನ್ಯಜೀವಿಗಳ ಎದುರಾದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಗೈಡ್‌ಗಳು ಮಾಹಿತಿ ನೀಡಲಿದ್ದಾರೆ. ಜೊತೆಗೆ ಮೂಲ ನೆಲೆಯಲ್ಲಿ ಕುಡಿಯುವ ನೀರು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಪ್ರತಿಯೊಬ್ಬ ಚಾರಣಿಗರು ತಮ್ಮ ಮೊಬೈಲ್‌ನಲ್ಲಿ ಚಾರಣ ಪಥದ ನಕ್ಷೆ ಇರುವ ಅಧಿಕೃತ ಆ್ಯಪ್‌ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಕಾಡಿನಲ್ಲಿ ಯಾರಾದರೂ ದಾರಿ ತಪ್ಪಿದರೆ ಸುಲಭವಾಗಿ ಪತ್ತೆಹಚ್ಚಲು ತಂತ್ರಜ್ಞಾನ ನೆರವಾಗಲಿದೆ. ಮಾರ್ಗದರ್ಶಕರಿಗೆ ಜಿಪಿಎಸ್ ಆಧಾರಿತ ವಾಕಿ-ಟಾಕಿ ನೀಡಲಿದ್ದು, ಅವರು ಪ್ರತಿ ಅರ್ಧ ಗಂಟೆಗೊಮ್ಮೆ ಬೇಸ್ ಕ್ಯಾಂಪ್ ಜೊತೆ ಸಂಪರ್ಕದಲ್ಲಿರಬೇಕು. ಅಪ್ರಾಪ್ತರು ಚಾರಣಕ್ಕೆ ಬರಬೇಕಾದರೆ ಪೋಷಕರ ಅನುಮತಿ ಪತ್ರ ಹಾಗೂ ಹಿರಿಯ ನಾಗರಿಕರಿಗೆ ವೈದ್ಯಕೀಯ ದೈಹಿಕ ದೃಢತಾ ಪ್ರಮಾಣಪತ್ರವನ್ನು ಕಡ್ಡಾಯ ಮಾಡಲಾಗಿದೆ. ತುರ್ತು ಪರಿಸ್ಥಿತಿಗಳಿಗಾಗಿ ಗೈಡ್‌ಗಳು ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು (ಫಸ್ಟ್ ಏಡ್ ಕಿಟ್) ಕೊಂಡೊಯ್ಯುವುದು ಅನಿವಾರ್ಯವಾಗಿದೆ.

ಪರಿಸರ ಸಂರಕ್ಷಣೆಗೂ ಈ ಮಾರ್ಗಸೂಚಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅರಣ್ಯದೊಳಗೆ ಏಕಬಳಕೆಯ ಪ್ಲಾಸ್ಟಿಕ್ ಒಯ್ಯುವುದು, ಕ್ಯಾಂಪ್ ಫೈರ್ ಮಾಡುವುದು ಮತ್ತು ವನ್ಯಜೀವಿಗಳಿಗೆ ತೊಂದರೆಯಾಗುವಂತೆ ಕ್ಯಾಮೆರಾ ಫ್ಲಾಶ್ ಬಳಸಿ ಫೋಟೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಚಾರಣಿಗರು ತಮ್ಮೊಂದಿಗೆ ಕೊಂಡೊಯ್ಯುವ ವಸ್ತುಗಳ ತ್ಯಾಜ್ಯವನ್ನು ಕಾಡಿನಲ್ಲಿ ಬಿಸಾಡದೆ, ಮರಳಿ ಬೇಸ್ ಕ್ಯಾಂಪ್‌ಗೆ ತಂದು ವಿಲೇವಾರಿ ಮಾಡಲೇಬೇಕು. ಈ ಎಲ್ಲಾ ಕಟ್ಟುನಿಟ್ಟಿನ ನಿಯಮಗಳು ರಾಜ್ಯದಲ್ಲಿನ ಚಾರಣವನ್ನು ಮತ್ತಷ್ಟು ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿಸುವ ಗುರಿ ಹೊಂದಿವೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.