S Shorts

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಪಶುವೈದ್ಯೆ ಸಾ*ವು ಪ್ರಕರಣಕ್ಕೆ Big Twist; ಆಕಸ್ಮಿಕವಲ್ಲ, ಷಡ್ಯಂತ್ರದ ಆರೋಪ!

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಪಶುವೈದ್ಯೆ ಸಾ*ವು ಪ್ರಕರಣಕ್ಕೆ Big Twist; ಆಕಸ್ಮಿಕವಲ್ಲ, ಷಡ್ಯಂತ್ರದ ಆರೋಪ!
Author: Sagaradventure
Posted By: Sagaradventure
Updated: Mar 29, 2026 | 12:40 PM

ಶಿವಮೊಗ್ಗ ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಇತ್ತೀಚೆಗೆ ನೀರಾನೆ (Hippo) ದಾಳಿಗೆ ಬಲಿಯಾದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (27) ಅವರ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇದೊಂದು ಕೇವಲ ಆಕಸ್ಮಿಕ ಘಟನೆಯಲ್ಲ, ಬದಲಾಗಿ ಇದರ ಹಿಂದೆ ದೊಡ್ಡ ಷಡ್ಯಂತ್ರ ಹಾಗೂ ಮೃಗಾಲಯದ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ ಅಡಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸಾವಿಗೂ ಮುನ್ನ ಡಾ. ಸಮೀಕ್ಷಾ ಅವರು ಮಾಡಿದ್ದ ವಾಟ್ಸ್‌ಆಪ್ (WhatsApp) ಚಾಟ್‌ಗಳು ಮೃಗಾಲಯದ ಒಳಗಿನ ಕರಾಳ ಮುಖ ಹಾಗೂ ಭದ್ರತಾ ಲೋಪಗಳನ್ನು ಅನಾವರಣಗೊಳಿಸಿವೆ. ಪ್ರಾಣಿಗಳಿಗೆ ಸರಿಯಾದ ಆಹಾರ, ಔಷಧೋಪಚಾರ ಸಿಗುತ್ತಿಲ್ಲ ಹಾಗೂ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂದು ಅವರು ಮೇಲಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು. ಮೃಗಾಲಯದ ಅವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅವರಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.

ಸಮೀಕ್ಷಾ ಅವರ ಮಾವ ರಾಜಶೇಖರ್ ಅವರು ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ಸಂಚು ಎಂದು ಆರೋಪಿಸಿದ್ದಾರೆ. “ಅಧಿಕಾರಿಗಳ ಅನುಮತಿ ಇಲ್ಲದೆ ರಾತ್ರಿ ವೇಳೆ ಜೀಪ್ ಸಫಾರಿ ಒಳಗೆ ಹೋಗಿದ್ದು ಹೇಗೆ? ನೀರಾನೆ ಇರುವ ಆವರಣದ ಗೇಟ್ ಕೀ ತೆಗೆದವರು ಯಾರು?” ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ, ಮುರುಳಿ ಮನೋಹರ್ ಎಂಬ ಸಿಬ್ಬಂದಿ ಈ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಘಟನೆಯ ವೇಳೆ ವೈದ್ಯೆಯೊಂದಿಗಿದ್ದ ಜೀಪ್ ಚಾಲಕ ಕಾರ್ತಿಕ್ ಎಂಬಾತ ನಾಪತ್ತೆಯಾಗಿದ್ದು, ಅಧಿಕಾರಿಗಳೇ ಆತನನ್ನು ಬಚ್ಚಿಟ್ಟಿದ್ದಾರೆ ಎಂದು ದೂರಿದ್ದಾರೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಘಟನೆಯ ಹಿನ್ನೆಲೆ: ಅಂದು ರಾತ್ರಿ ಸುಮಾರು 10:30ರ ವೇಳೆಗೆ ಮೃಗಾಲಯದ ಆಸ್ಪತ್ರೆಯಲ್ಲಿದ್ದ ‘ಸನ್ ಕಾನರ್’ ಹಕ್ಕಿಗೆ ಚಿಕಿತ್ಸೆ ನೀಡಿದ್ದ ಡಾ. ಸಮೀಕ್ಷಾ, ಬಳಿಕ ರಾತ್ರಿ 11.45ರ ಸುಮಾರಿಗೆ ‘ಹಂಸಿಣಿ’ ಹೆಸರಿನ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ (ಇನ್‌ಫ್ರಾರೆಡ್ ಥರ್ಮೋಗ್ರಫಿ) ಮೂಲಕ ಪರೀಕ್ಷಿಸಲು ಆವರಣದೊಳಗೆ ಪ್ರವೇಶಿಸಿದ್ದರು. ಪರೀಕ್ಷೆ ಮುಗಿಯುತ್ತಿದ್ದಂತೆ ಕೆರಳಿದ ನೀರಾನೆ ಏಕಾಏಕಿ ಅವರ ಮೇಲೆ ತೀವ್ರವಾಗಿ ದಾಳಿ ನಡೆಸಿತ್ತು. ದಾಳಿಯ ತೀವ್ರತೆಗೆ ವೈದ್ಯೆಯ ಹೊಟ್ಟೆ ಹಾಗೂ ಯಕೃತ್ತಿಗೆ (ಲಿವರ್) ತೀವ್ರ ಹಾನಿಯಾಗಿತ್ತು. ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ 6:30ರ ಸುಮಾರಿಗೆ ಅವರು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದರು.

ವನ್ಯಜೀವಿ ಧಾಮದಲ್ಲಿ ಕರ್ತವ್ಯನಿರತ ವೈದ್ಯೆಯೊಬ್ಬರು ಪ್ರಾಣ ಕಳೆದುಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಈ ದುಃಖದ ಸಮಯದಲ್ಲಿ ಸರ್ಕಾರ ಮೃತ ವೈದ್ಯೆಯ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಘಟನೆಯ ಹಿಂದಿನ ಭದ್ರತಾ ಲೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.