S Shorts

3 ಲಕ್ಷ ರೂ. ಮೌಲ್ಯದ 11 ಕೆಜಿಗೂ ಅಧಿಕ ಗಾಂಜಾ ಸುಟ್ಟ ಅಧಿಕಾರಿಗಳು: ಜಪ್ತಿಯಾದ ಮಾದಕ ದ್ರವ್ಯ ನಾಶಪಡಿಸಿದ ಅಬಕಾರಿ ಇಲಾಖೆ

3 ಲಕ್ಷ ರೂ. ಮೌಲ್ಯದ 11 ಕೆಜಿಗೂ ಅಧಿಕ ಗಾಂಜಾ ಸುಟ್ಟ ಅಧಿಕಾರಿಗಳು: ಜಪ್ತಿಯಾದ ಮಾದಕ ದ್ರವ್ಯ ನಾಶಪಡಿಸಿದ ಅಬಕಾರಿ ಇಲಾಖೆ
Author: Sagaradventure
Posted By: Sagaradventure
Updated: May 1, 2026 | 11:55 AM

ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎನ್.ಡಿ.ಪಿ.ಎಸ್ (NDPS) ಕಾಯ್ದೆಯಡಿ ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿ ಜಪ್ತು ಮಾಡಿಕೊಂಡಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಒಟ್ಟು 11.265 ಕೆಜಿ ಒಣ ಗಾಂಜಾವನ್ನು ಮಂಗಳವಾರ ಅಂಕೋಲಾದಲ್ಲಿ ಅಧಿಕೃತವಾಗಿ ನಾಶಪಡಿಸಲಾಗಿದೆ. ಮಾದಕ ವಸ್ತುಗಳ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇಲಾಖೆ ಈ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದೆ.

ಜಿಲ್ಲೆಯ ಶಿರಸಿ ವಲಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ 4 ಪ್ರಕರಣಗಳು, ದಾಂಡೇಲಿ ವಲಯದ 1 ಹಾಗೂ ಕುಮಟಾ ವ್ಯಾಪ್ತಿಯ 1 ಪ್ರಕರಣ ಸೇರಿ ಒಟ್ಟು 6 ಪ್ರಕರಣಗಳಲ್ಲಿ ಈ ಬೃಹತ್ ಪ್ರಮಾಣದ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ವಿವಿಧ ನ್ಯಾಯಾಲಯಗಳ ನಿರ್ದೇಶನದ ಅನ್ವಯ ಈ ಮಾದಕ ದ್ರವ್ಯವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕಾಗಿದ್ದರಿಂದ, ಅಬಕಾರಿ ಇಲಾಖೆಯು ‘ಡ್ರಗ್ ಡಿಸ್ಪೋಸಲ್ ಕಮಿಟಿ’ಯ (Drug Disposal Committee) ನೇತೃತ್ವದಲ್ಲಿ ಈ ವಿಲೇವಾರಿ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆ ಹಾಗೂ ಪಾರದರ್ಶಕವಾಗಿ ನಡೆಸಿದೆ.

ಅಂಕೋಲಾದಲ್ಲಿರುವ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಇನ್ಸಿರನೇಟರ್‌ನಲ್ಲಿ ಜಪ್ತಿಯಾಗಿದ್ದ ಈ ಗಾಂಜಾವನ್ನು ಬೆಂಕಿಯಲ್ಲಿ ಸುಡುವ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತು. ಡ್ರಗ್ ಡಿಸ್ಪೋಸಲ್ ಕಮಿಟಿಯ ಅಧ್ಯಕ್ಷ ಹಾಗೂ ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಎ.ಎಲ್. ನಾಗೇಶ, ಕಾರವಾರ ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ಎ. ಹಾಗೂ ಉಡುಪಿ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ಅವರ ನೇರ ಉಸ್ತುವಾರಿಯಲ್ಲಿ ಈ ಮಹತ್ವದ ಕಾರ್ಯ ಸಂಪನ್ನಗೊಂಡಿದೆ. ಈ ಸಂದರ್ಭದಲ್ಲಿ ಕಾರವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಫೀಲ್ಡ್ ಆಫೀಸರ್ ಪ್ರಥಮೇಶ ಮೇತ್ರಿ, ಅಬಕಾರಿ ಇಲಾಖೆಯ ಸಂಬಂಧಪಟ್ಟ ತನಿಖಾಧಿಕಾರಿಗಳು ಹಾಗೂ ಅಂಕೋಲಾದ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.