ಬೆಂಗಳೂರು: ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಜರ್ಮನ್ ಮೂಲದ ಇನ್ಫ್ಲ್ಯುಯೆನ್ಸರ್ ಹಾಗೂ ಮಾಡೆಲ್ ಲಿಜ್‌ಲಾಜ್ (LizLaz) ಅವರ ಇನ್‌ಸ್ಟಾಗ್ರಾಮ್ ಫೋಟೋವೊಂದನ್ನು ಲೈಕ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈ ವಿಚಾರವು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಚರ್ಚೆಗೊಳಗಾಗಿ, ಸ್ಕ್ರೀನ್‌ಶಾಟ್‌ಗಳು ಕೆಲವೇ ಸೆಕೆಂಡುಗಳಲ್ಲಿ ವೈರಲ್ ಆಗಿದ್ದವು. ಅನಿರೀಕ್ಷಿತವಾಗಿ ಸಿಕ್ಕ ಈ ‘ಲೈಮ್‌ಲೈಟ್’ ಹಾಗೂ ವೈರಲ್ ಸುದ್ದಿಯ ಕುರಿತು ಇದೀಗ ಸ್ವತಃ ಲಿಜ್‌ಲಾಜ್ (ಜೆನ್ನಿಫರ್) ಮೌನ ಮುರಿದು ಮಾತನಾಡಿದ್ದಾರೆ.
ಯಾರು ಈ ಲಿಜ್‌ಲಾಜ್?
ಲಿಜ್‌ಲಾಜ್ (ಜೆನ್ನಿಫರ್) ಜರ್ಮನ್-ದಕ್ಷಿಣ ಆಫ್ರಿಕಾ ಮೂಲದ ಟ್ರಾವೆಲ್ ವ್ಲಾಗರ್ ಮತ್ತು ಗಾಯಕಿ. ಬಹುಭಾಷಾ ಕೌಶಲ್ಯಗಳನ್ನು ಹೊಂದಿರುವ ಇವರು, “ಸಮೋಸಾ ಸಮೋಸಾ” ನಂತಹ ವೈರಲ್ ಕಂಟೆಂಟ್‌ಗಳ ಮೂಲಕ ಭಾರತೀಯ ಅಭಿಮಾನಿಗಳ ಗಮನ ಸೆಳೆದಿದ್ದರು. ವಿರಾಟ್ ಕೊಹ್ಲಿ ಇವರ ಪೋಸ್ಟ್ ಅನ್ನು ಲೈಕ್ ಮಾಡಿದ ತಕ್ಷಣ, ಇವರು ಭಾರತದಲ್ಲಿ ರಾತ್ರೋರಾತ್ರಿ ಟ್ರೆಂಡಿಂಗ್ ಆಗಿದ್ದರು.
“ವಿರಾಟ್ ಬಗ್ಗೆ ನನಗೆ ಬೇಸರವಾಯಿತು”
ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲಿಜ್‌ಲಾಜ್, ಆರಂಭದಲ್ಲಿ ಖುಷಿಯಾದರೂ ನಂತರ ಪರಿಸ್ಥಿತಿ ಮಿತಿಮೀರಿದಾಗ ತಮಗೆ ಬೇಸರವಾಯಿತು ಎಂದು ಅಳಲು ತೋಡಿಕೊಂಡಿದ್ದಾರೆ.
“ವಿರಾಟ್ ನನ್ನ ಪೋಸ್ಟ್ ಲೈಕ್ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ಆದರೆ ನಂತರ ಅವರು ಅದನ್ನು ಅನ್‌ಲೈಕ್ (Unlike) ಮಾಡಿದರು. ಈ ವಿಚಾರದಲ್ಲಿ ನನಗೆ ಅವರ (ವಿರಾಟ್) ಬಗ್ಗೆ ಸ್ವಲ್ಪ ಬೇಸರವಾಯಿತು. ಏಕೆಂದರೆ, ಒಂದು ಸಾಮಾನ್ಯ ಲೈಕ್ ಹೇಗೆ ಇಷ್ಟು ದೊಡ್ಡ ಸುದ್ದಿಯಾಯಿತು ಎಂದು ನನಗೇ ತಿಳಿದಿಲ್ಲ. ಜನರು ಅದನ್ನು ಹೇಗೆ ಗಮನಿಸಿದರು ಹಾಗೂ ಏತಕ್ಕಾಗಿ ಇಷ್ಟು ದೊಡ್ಡ ಸುದ್ದಿ ಮಾಡಿದರು ಎಂಬುದು ಆಶ್ಚರ್ಯ ತಂದಿದೆ. ಬಹುಶಃ ಲೈಕ್ ಮಾಡುವುದರ ಹಿಂದೆ ಅವರ ಉದ್ದೇಶ ಆ ರೀತಿ ಇರಲಿಲ್ಲ. ಆದರೂ, ಅವರಿಂದ ಸಿಕ್ಕ ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ ಹಾಗೂ ಅದಕ್ಕೆ ಕೃತಜ್ಞಳಾಗಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಸುದ್ದಿ ವೈರಲ್ ಆಗುವವರೆಗೆ ಲಿಜ್‌ಗೆ ವಿಷಯವೇ ತಿಳಿದಿರಲಿಲ್ಲ!
ವಿರಾಟ್ ಲೈಕ್ ಮಾಡಿದ ವಿಚಾರ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗುವವರೆಗೂ ತಮಗೆ ಈ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ ಎಂದು ಲಿಜ್ ಹೇಳಿದ್ದಾರೆ.
“ನಾನು ಬೆಳಿಗ್ಗೆ ಎಚ್ಚರವಾದಾಗ ಈ ಸುದ್ದಿ ಕಂಡು ಅಚ್ಚರಿಪಟ್ಟೆ. ಅವರಿಗೆ ನನ್ನ ಚಿತ್ರ ಯಾವಾಗ ಇಷ್ಟವಾಯಿತು ಎಂಬುದೇ ನನಗೆ ತಿಳಿದಿರಲಿಲ್ಲ. ಸುದ್ದಿಯ ಮೂಲಕವೇ ನನಗೂ ಈ ವಿಷಯ ತಿಳಿಯಿತು. ಅನೇಕ ಜನರು ನನ್ನ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಬಂದ ಲೇಖನಗಳನ್ನು ಕಂಡು, ಅವುಗಳನ್ನು ನನ್ನ ಇನ್‌ಸ್ಟಾಗ್ರಾಮ್ ಡಿಎಂ (DM) ಗಳಿಗೆ ಕಳುಹಿಸಿದ್ದರು. ಆ ದಿನ ನನಗೆ ಲೆಕ್ಕವಿಲ್ಲದಷ್ಟು ಸಂದೇಶಗಳು ಬಂದಿದ್ದವು, ಜನರು ಇದರ ಬಗ್ಗೆ ತುಂಬಾ ಉತ್ಸುಕರಾಗಿದ್ದರು” ಎಂದು ಲಿಜ್‌ಲಾಜ್ ವಿವರಿಸಿದ್ದಾರೆ.
