S Shorts

ಊಟ ತಿಂದ ಬೆನ್ನಲ್ಲೇ ವಾಂತಿ-ಭೇದಿ: ಬೀದರ್‌ನ ಜಾಂತಿ ಗಾಮದಲ್ಲಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ

ಊಟ ತಿಂದ ಬೆನ್ನಲ್ಲೇ ವಾಂತಿ-ಭೇದಿ: ಬೀದರ್‌ನ ಜಾಂತಿ ಗಾಮದಲ್ಲಿ 40ಕ್ಕೂ ಅಧಿಕ ಮಂದಿ ಅಸ್ವಸ್ಥ
Author: Savina Naik
Posted By: Savina Naik
Updated: Apr 7, 2026 | 3:45 PM

ಬೀದರ್: ಜಿಲ್ಲೆಯ ಭಾಲ್ಕಿ ತಾಲೂಕಿನ ಜಾಂತಿ ಗ್ರಾಮದಲ್ಲಿ  ಹೊಸ ಮನೆಯ ಮೇಲ್ಛಾವಣಿ ಹಾಕಿದ ಖುಷಿಗೆ ನಡೆದ ಔತಣಕೂಟವೊಂದು ವಿಷಾಹಾರವಾಗಿ (Food Poison) ಪರಿಣಮಿಸಿದೆ. ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸ ಮನೆಯ ಮೇಲ್ಛಾವಣಿ ಹಾಕಿದ ಖುಷಿಗೆ ರಾಜಕುಮಾರ್ ಎಂಬುವವರು ಹುಗ್ಗಿ, ಅನ್ನ, ಸಾಂಬಾರ್ ಮಾಡಿಸಿ, ಗ್ರಾಮಸ್ಥರಿಗೆ ಊಟ ಹಾಕಿಸಿದ್ದರು. ಇದನ್ನು ತಿಂದು ಗ್ರಾಮದ ಜನರು ಬೆಳಗಿನ ಜಾವ ಫುಡ್ ಪಾಯಿಸನ್ ಆಗಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದಾರೆ. 40ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದು, 5 ರಿಂದ 6 ಜನರ ಸ್ಥಿತಿ ಗಂಭೀರವಾಗಿದೆ.

ಒಟ್ಟು 40ಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ವ್ಯತ್ಯಾಸ ಕಂಡುಬಂದಿದ್ದು, ಈ ಪೈಕಿ ಐದರಿಂದ ಆರು ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಅಸ್ವಸ್ಥರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ 10 ರಿಂದ 15 ಜನರು ಬ್ರಿಮ್ಸ್‌ನ ತುರ್ತು ಚಿಕಿತ್ಸಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಮನೆಯ ಮಾಲೀಕರಾದ ರಾಜಕುಮಾರ್, ಸಂಗೀತಾ, ಈರಮ್ಮ, ಶಿವಾನಂದ್ ಮತ್ತು ಅಂಬಿಕಾ ಸೇರಿದಂತೆ ಹಲವರ ಸ್ಥಿತಿ ಕೂಡ ಗಂಭೀರವಾಗಿದ್ದು, ಉಳಿದ ಜನರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೇಸಿಗೆಯ ಕಾರಣದಿಂದ ಆಹಾರ ಕೆಟ್ಟಿರಬಹುದು ಅಥವಾ ಅಡುಗೆಗೆ ಬಳಸಿದ ಪದಾರ್ಥಗಳಲ್ಲಿ ವ್ಯತ್ಯಯ ಉಂಟಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಬೆನ್ನಲ್ಲೇ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.