S Shorts

Warning to Public | ಮತ್ತೆ ರಸ್ತೆಗಿಳಿಯಲಿವೆ ಟೋಯಿಂಗ್ ವಾಹನಗಳು: ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದ್ರೆ ಬೀಳುತ್ತೆ ದಂಡ!

Warning to Public | ಮತ್ತೆ ರಸ್ತೆಗಿಳಿಯಲಿವೆ ಟೋಯಿಂಗ್ ವಾಹನಗಳು: ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿದ್ರೆ ಬೀಳುತ್ತೆ ದಂಡ!
Author: Meghana Gowda
Posted By: Meghana Gowda
Updated: Feb 2, 2026 | 9:19 AM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿರುವ ವಾಹನ ಸಂಚಾರ ಮತ್ತು ಎಲ್ಲೆಂದರಲ್ಲಿ ಪಾರ್ಕ್ ಮಾಡಲಾಗುತ್ತಿರುವ ವಾಹನಗಳಿಂದ ಉಂಟಾಗುತ್ತಿರುವ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸ್ಥಗಿತಗೊಂಡಿದ್ದ ‘ಟೋಯಿಂಗ್’ (Towing) ಪ್ರಕ್ರಿಯೆಯನ್ನು ಪುನರಾರಂಭಿಸಲು ಪೊಲೀಸರು ಮತ್ತು ಜಿಬಿಎ (GBA) ಸಿದ್ಧತೆ ನಡೆಸಿವೆ.

ಟೋಯಿಂಗ್ ಅಸ್ತ್ರವೇಕೆ?

ಮುಖ್ಯ ರಸ್ತೆಗಳಲ್ಲಿ ಅನಧಿಕೃತ ಪಾರ್ಕಿಂಗ್ ಮಾಡುವುದರಿಂದ ಬಸ್ ಮತ್ತು ಇತರ ವಾಹನಗಳ ಸಂಚಾರಕ್ಕೆ ಭಾರಿ ಅಡಚಣೆಯಾಗುತ್ತಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆ ಗಣನೀಯವಾಗಿ ಏರಿಕೆಯಾಗಿದೆ.

ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ (TomTom Traffic Index) ಸಂಸ್ಥೆ ಬಿಡುಗಡೆ ಮಾಡಿದ 2025ರ ಸಂಚಾರ ಸೂಚ್ಯಂಕದಲ್ಲಿ ಬೆಂಗಳೂರು ವಿಶ್ವದ 2ನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರ ಎಂಬ ಕುಖ್ಯಾತಿ ಪಡೆದಿತ್ತು. 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7ರಷ್ಟಿತ್ತು. ಅಂದರೆ ಕೇವಲ ಒಂದು ವರ್ಷದಲ್ಲಿ ಶೇ 1.7ರಷ್ಟು ಸಂಚಾರ ದಟ್ಟಣೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ಕಿರಿದಾದ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದನ್ನು ನಿಯಂತ್ರಿಸಲು ಟೋಯಿಂಗ್ ವ್ಯವಸ್ಥೆಯನ್ನು ಮರಳಿ ತರಲು ಯೋಜನೆ ರೂಪಿಸಿದ್ದಾರೆ.