ಬೆಂಗಳೂರು: ಆಂಧ್ರಪ್ರದೇಶದ ನೆಲ್ಲೂರು ಕರಾವಳಿಯತ್ತ ಧಾವಿಸುತ್ತಿರುವ ‘ಮುರಸು’ ಚಂಡಮಾರುತವು ಇಂದು ತಡರಾತ್ರಿ ಭೂಪ್ರವೇಶ ಮಾಡಲಿದ್ದು, ಇದರ ನೇರ ಪ್ರಭಾವ ಕರ್ನಾಟಕದ ಮೇಲೂ ಬೀರಲಿದೆ. ಚಂಡಮಾರುತ ದುರ್ಬಲಗೊಂಡರೂ, ಗಾಳಿಯ ಅಧಿಕ ಒತ್ತಡದ ಪರಿಣಾಮವಾಗಿ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನವೆಂಬರ್ 3ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ವರದಿ ಹೀಗಿದೆ:
ಕರಾವಳಿ ಮತ್ತು ಮಲೆನಾಡು ಭಾಗ:
ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ದಿನವಿಡೀ ಮೋಡಕವಿದ ವಾತಾವರಣವಿರಲಿದ್ದು, ಮುಂಜಾನೆಯಿಂದ ರಾತ್ರಿಯವರೆಗೆ ಅಲ್ಲಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮಲೆನಾಡಿನ ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನವೆಂಬರ್ 8ರವರೆಗೂ ಇದೇ ರೀತಿ ಮಳೆ ಮುಂದುವರಿಯುವ ಲಕ್ಷಣಗಳಿವೆ.
ಉತ್ತರ ಒಳನಾಡು:
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 3ರಂದು ಮುರಸು ಚಂಡಮಾರುತದ ಪ್ರಭಾವದಿಂದ ಈ ಭಾಗದಲ್ಲಿ ಹೆಚ್ಚಿನ ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗಬಹುದು.
ದಕ್ಷಿಣ ಒಳನಾಡು:
ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು (ಪಾವಗಢ ಸೇರಿ) ಜಿಲ್ಲೆಗಳಲ್ಲಿ ಸಂಜೆ, ರಾತ್ರಿ ವೇಳೆಗೆ ಗುಡುಗು ಸಹಿತ ಮಳೆಯಾಗಲಿದೆ. ವಿಶೇಷವಾಗಿ ದಾವಣಗೆರೆ, ವಿಜಯನಗರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನವೆಂಬರ್ 3ರಂದು ಚಂಡಮಾರುತದ ಅಬ್ಬರದಿಂದಾಗಿ ಅತಿ ವೇಗದ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
