S Shorts

‘ಥೂ.. ಥೂ.. ನಾನೇಕೆ JDSಗೆ ಹೋಗಲಿ?’ ಕಾಂಗ್ರೆಸ್ ತೊರೆಯುವ ವದಂತಿಗಳಿಗೆ ಖಡಕ್ ಉತ್ತರ ನೀಡಿದ ಸಚಿವ Jameer!

‘ಥೂ.. ಥೂ.. ನಾನೇಕೆ JDSಗೆ ಹೋಗಲಿ?’ ಕಾಂಗ್ರೆಸ್ ತೊರೆಯುವ ವದಂತಿಗಳಿಗೆ ಖಡಕ್ ಉತ್ತರ ನೀಡಿದ ಸಚಿವ Jameer!
Author: Sagaradventure
Posted By: Sagaradventure
Updated: Apr 21, 2026 | 1:40 PM

ಸಚಿವ ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ ತೊರೆದು ಮತ್ತೆ ತಮ್ಮ ಮಾತೃಪಕ್ಷ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ ಎಂಬ ಊಹಾಪೋಹಗಳಿಗೆ ಇದೀಗ ಸ್ವತಃ ಜಮೀರ್ ಸ್ಪಷ್ಟನೆ ನೀಡುವ ಮೂಲಕ ತೆರೆ ಎಳೆದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ನಾಯಕರ ವಿರುದ್ಧ ಕೈಗೊಂಡ ಶಿಸ್ತು ಕ್ರಮಗಳಿಂದ ಅಸಮಾಧಾನಗೊಂಡು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದವು. ಆದರೆ, ಮಾಧ್ಯಮಗಳ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಥೂ.. ಥೂ.. ಥೂ.. ಹಾಗೇನೂ ಇಲ್ಲ, ನಾನೇಕೆ ಜೆಡಿಎಸ್​ಗೆ ಹೋಗಲಿ, ಅದೆಲ್ಲಾ ಕೇವಲ ಊಹಾಪೋಹ” ಎಂದು ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ನಾನು ಈಗಾಗಲೇ ಜೆಡಿಎಸ್ ಬಿಟ್ಟು ಬಂದಿದ್ದೇನೆ, ಕಾಂಗ್ರೆಸ್ ಪಕ್ಷ ನನಗೇನೂ ಕಡಿಮೆ ಮಾಡಿಲ್ಲ ಎಂದು ಹೇಳಿದ ಜಮೀರ್, ಪಕ್ಷ ತಮಗೆ ನೀಡಿದ ಪ್ರಾಶಸ್ತ್ಯವನ್ನು ಸ್ಮರಿಸಿದರು. 2017ರಲ್ಲಿ ತಾವು ಕಾಂಗ್ರೆಸ್ ಸೇರಿದ ಬಳಿಕ, 2018ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಾವು ಮಂತ್ರಿಯಾಗುವ ನಿರೀಕ್ಷೆಯನ್ನೇ ಮಾಡಿರಲಿಲ್ಲ ಎಂದರು.

ತಾನು ಯಾರ ಬಳಿಯೂ ಕೇಳದಿದ್ದರೂ ಕಾಂಗ್ರೆಸ್ ತನಗೆ ಐದು ಖಾತೆಗಳನ್ನು ನೀಡಿ ಸಚಿವ ಸ್ಥಾನ ಒದಗಿಸಿತ್ತು. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಕೇವಲ ವಕ್ಫ್ ಮತ್ತು ಹಜ್ ಖಾತೆಗಳಿಗೆ ಸೀಮಿತವಾಗಿದ್ದ ತನಗೆ, ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಸ್ಥಾನಮಾನ ನೀಡಿದೆ. ಅಲ್ಲದೆ 2023ರಲ್ಲೂ ಪ್ರಮುಖ ನಾಲ್ಕು ಖಾತೆಗಳನ್ನು ನೀಡಿ ಗೌರವಿಸಿದೆ. ಪಕ್ಷ ಇಷ್ಟೆಲ್ಲಾ ಸ್ಥಾನಮಾನ ನೀಡಿದ್ದಾಗ, ನಾನು ಮತ್ತೆ ಜೆಡಿಎಸ್ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಜೊತೆಗಿನ ರಹಸ್ಯ ಭೇಟಿಯ ಕುರಿತ ವದಂತಿಯನ್ನೂ ನಿರಾಕರಿಸಿದ ಸಚಿವರು, ನಾನೇಕೆ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಲಿ ಎಂದು ಮರುಪ್ರಶ್ನಿಸಿದ್ದಾರೆ. 2018ರಲ್ಲಿ ಪಕ್ಷದಲ್ಲಿ ತಮಗಿಂತ ಹಿರಿಯ ನಾಯಕರಾದ ರೋಷನ್ ಬೇಗ್, ತನ್ವೀರ್ ಸೇಠ್, ಎನ್.ಎ. ಹ್ಯಾರಿಸ್ ಅವರಂತಹ ಘಟಾನುಘಟಿ ನಾಯಕರಿದ್ದರೂ, ಕಾಂಗ್ರೆಸ್ ತಮ್ಮನ್ನು ಗುರುತಿಸಿ ಸಚಿವ ಸ್ಥಾನ ನೀಡಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಪಕ್ಷ ತನಗೆ ಎಲ್ಲವನ್ನೂ ನೀಡಿದ್ದು, ಯಾವ ಅಸಮಾಧಾನವೂ ಇಲ್ಲ. ಹಾಗಾಗಿ ನಾನು ಎಲ್ಲೂ ಹೋಗುವುದಿಲ್ಲ, ಪಕ್ಷ ಬದಲಿಸುವ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ನಡೆಯ ಸುತ್ತ ಹಬ್ಬಿದ್ದ ಎಲ್ಲಾ ಗೊಂದಲಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.