ದಾವಣಗೆರೆ ಚುನಾವಣೆ ವೇಳೆ ನಡೆದ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಪ್ರಮುಖ ಮುಸ್ಲಿಂ ಮುಖಂಡರ ತಲೆದಂಡವಾಗಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ರಾಜ್ಯದ ಪ್ರಭಾವಿ ಸಚಿವ ಜಮೀರ್ ಅಹ್ಮದ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿದ್ದು, ಅವರು ಕಾಂಗ್ರೆಸ್ ತೊರೆಯಲು ಸಜ್ಜಾಗಿದ್ದಾರಾ ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.
ಕಾಂಗ್ರೆಸ್ ಪಕ್ಷಕ್ಕೆ ‘ಕೈ’ ಕೊಟ್ಟು ಅವರು ಮರಳಿ ತಮ್ಮ ಹಳೆಯ ಗೂಡಾದ ಜೆಡಿಎಸ್‌ನತ್ತ ಮುಖ ಮಾಡಲಿದ್ದಾರೆ ಹಾಗೂ ದಳಪತಿಗೆ ಸಾಥ್ ನೀಡಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಜಮೀರ್ ಅಹ್ಮದ್ ಈಗಾಗಲೇ ಸೀಕ್ರೆಟ್ ಡೀಲ್ ಮಾಡಿಕೊಂಡಿದ್ದಾರೆ ಎಂಬ ಬಲವಾದ ವದಂತಿಗಳಿವೆ. ‘ಮರಳಿ ಗೂಡಿಗೆ ನಾ ಬರುವೆ’ ಎಂದು ಅವರು ಕುಮಾರಸ್ವಾಮಿ ಅವರಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಕೇವಲ ಪಕ್ಷ ಸೇರ್ಪಡೆ ಮಾತ್ರವಲ್ಲದೆ, ತಾವು ಸೂಚಿಸಿದ 10 ಜನರಿಗೆ ಟಿಕೆಟ್ ನೀಡಬೇಕು ಎಂಬ ಕಟ್ಟುನಿಟ್ಟಿನ ಬೇಡಿಕೆಯನ್ನು ಜಮೀರ್ ಮುಂದಿಟ್ಟಿದ್ದಾರೆ ಎಂಬ ಚರ್ಚೆಗಳು ಗರಿಗೆದರಿವೆ. ಅಷ್ಟೇ ಅಲ್ಲದೆ, ಆ 10 ಅಭ್ಯರ್ಥಿಗಳ ಸಂಪೂರ್ಣ ಚುನಾವಣಾ ವೆಚ್ಚವನ್ನು ತಾವೇ ಖುದ್ದಾಗಿ ಭರಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಇನ್ನು, ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರ ಬಂದರೆ ತಮಗೆ ಪ್ರತಿಷ್ಠಿತ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂಬ ಷರತ್ತನ್ನೂ ಜಮೀರ್ ವಿಧಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾದರೆ, ತಮ್ಮ ಜೊತೆ ಕಾಂಗ್ರೆಸ್ ತೊರೆದು ಬರುವ ಬೆಂಬಲಿಗರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಬಗ್ಗೆಯೂ ಉಭಯ ನಾಯಕರ ನಡುವೆ ಗಂಭೀರ ಚರ್ಚೆ ನಡೆದಿದೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಈ ದಿಢೀರ್ ಬೆಳವಣಿಗೆಗಳು ಮುಂಬರುವ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ತೀವ್ರ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.
