S Shorts

2 ವರ್ಷಗಳಿಂದ ತಂದೆಯ ವ್ಯಾನ್‌ನಲ್ಲೇ ಬಂಧಿಯಾಗಿದ್ದ 9 ವರ್ಷದ ಬಾಲಕ: ಸ್ನಾನವಿಲ್ಲ, ನಡೆಯಲೂ ಆಗದ ಶೋಚನೀಯ ಸ್ಥಿತಿಯಲ್ಲಿ ರಕ್ಷಣೆ!

2 ವರ್ಷಗಳಿಂದ ತಂದೆಯ ವ್ಯಾನ್‌ನಲ್ಲೇ ಬಂಧಿಯಾಗಿದ್ದ 9 ವರ್ಷದ ಬಾಲಕ: ಸ್ನಾನವಿಲ್ಲ, ನಡೆಯಲೂ ಆಗದ ಶೋಚನೀಯ ಸ್ಥಿತಿಯಲ್ಲಿ ರಕ್ಷಣೆ!
Author: Sagaradventure
Posted By: Sagaradventure
Updated: Apr 12, 2026 | 11:14 AM

ಫ್ರಾನ್ಸ್‌ನಲ್ಲಿ ಅಮಾನವೀಯ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, 2024 ರಿಂದ ತಂದೆಯ ಯುಟಿಲಿಟಿ ವ್ಯಾನ್‌ನಲ್ಲಿ ಬಂಧಿಯಾಗಿದ್ದ 9 ವರ್ಷದ ಬಾಲಕನನ್ನು ರಕ್ಷಿಸಲಾಗಿದೆ. ಸುದೀರ್ಘ ಕಾಲದಿಂದ ಒಂದೇ ಜಾಗದಲ್ಲಿ ಕುಳಿತಿದ್ದ ಪರಿಣಾಮ ಬಾಲಕ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಎದ್ದು ನಡೆಯಲೂ ಸಾಧ್ಯವಾಗದಂತಹ ಶೋಚನೀಯ ಸ್ಥಿತಿಗೆ ತಲುಪಿದ್ದಾನೆ.

ಈ ಆಘಾತಕಾರಿ ಘಟನೆ ಕುರಿತು ವಿಚಾರಣೆ ನಡೆಸಿದಾಗ ಬಾಲಕನ ತಂದೆ ವಿಚಿತ್ರ ಕಾರಣವೊಂದನ್ನು ನೀಡಿದ್ದಾನೆ. ತನ್ನ ಸಂಗಾತಿಯು ಬಾಲಕನನ್ನು ಮಾನಸಿಕ ಚಿಕಿತ್ಸಾಲಯಕ್ಕೆ ಸೇರಿಸಲು ಮುಂದಾಗಿದ್ದಳು, ಹೀಗಾಗಿ ಆತನನ್ನು ‘ರಕ್ಷಿಸುವ’ ಉದ್ದೇಶದಿಂದ 2024 ರ ನವೆಂಬರ್‌ನಲ್ಲಿ ಆತನನ್ನು ವ್ಯಾನ್‌ನಲ್ಲಿ ಕೂಡಿಹಾಕಿದ್ದಾಗಿ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಆ ಸಂದರ್ಭದಲ್ಲಿ ಬಾಲಕನಿಗೆ ಕೇವಲ 7 ವರ್ಷ ವಯಸ್ಸಾಗಿತ್ತು. ಆದರೆ ಈ ವಾದವನ್ನು ತಳ್ಳಿಹಾಕಿರುವ ಪ್ರಾಸಿಕ್ಯೂಟರ್, ಬಾಲಕ ನಾಪತ್ತೆಯಾಗುವ ಮುನ್ನ ಆತನಿಗೆ ಯಾವುದೇ ಮಾನಸಿಕ ಸಮಸ್ಯೆಗಳಿದ್ದ ಬಗ್ಗೆ ವೈದ್ಯಕೀಯ ದಾಖಲೆಗಳಿಲ್ಲ ಹಾಗೂ ಆತ ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ವೇಳೆ ಪ್ರತಿಕ್ರಿಯಿಸಿರುವ ಬಾಲಕ, ತಂದೆಯ ಸಂಗಾತಿಯ ಜೊತೆ ತನಗೆ ಭಾರಿ ಸಮಸ್ಯೆಗಳು ಇದ್ದವು, ಹೀಗಾಗಿ ತನ್ನನ್ನು ಕೂಡಿಹಾಕುವುದನ್ನು ಬಿಟ್ಟು ತಂದೆಗೆ ಬೇರೆ ದಾರಿ ಇರಲಿಲ್ಲ ಎಂದು ತಾನು ಭಾವಿಸಿದ್ದಾಗಿ ಹೇಳಿದ್ದಾನೆ. ಜೊತೆಗೆ 2024 ರಿಂದ ತಾನು ಸ್ನಾನವನ್ನೇ ಮಾಡಿಲ್ಲ ಎಂಬ ಕರುಣಾಜನಕ ವಿಚಾರವನ್ನೂ ಬಾಲಕ ಬಿಚ್ಚಿಟ್ಟಿದ್ದಾನೆ. ಸದ್ಯ ತಂದೆಯ ವಿರುದ್ಧ ಅಪಹರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಿ ಕಸ್ಟಡಿಗೆ ಪಡೆಯಲಾಗಿದೆ. ಆದರೆ ವ್ಯಾನ್‌ನಲ್ಲಿ ಬಾಲಕ ಇದ್ದ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಆತನ ಸಂಗಾತಿ ನಿರಾಕರಿಸಿದ್ದಾಳೆ. ಅಪಾಯದಲ್ಲಿದ್ದ ಅಪ್ರಾಪ್ತನಿಗೆ ಸಹಾಯ ಮಾಡದ ಆರೋಪದ ಮೇಲೆ ಆಕೆಯ ವಿರುದ್ಧವೂ ಪ್ರಾಥಮಿಕ ಆರೋಪಗಳನ್ನು ದಾಖಲಿಸಲಾಗಿದ್ದು, ನ್ಯಾಯಾಂಗ ನಿಗಾದ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಬಾಲಕನ 12 ವರ್ಷದ ಸಹೋದರಿ ಹಾಗೂ ತಂದೆಯ ಸಂಗಾತಿಯ 10 ವರ್ಷದ ಪುತ್ರಿಯನ್ನು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ. ಬಾಲಕನನ್ನು ಕೂಡಿಹಾಕಿರುವ ಬಗ್ಗೆ ಬೇರೆ ಯಾರಿಗಾದರೂ ತಿಳಿದಿತ್ತೇ ಎಂಬ ಕೋನದಲ್ಲಿ ಪ್ರಾಸಿಕ್ಯೂಟರ್ ಕಚೇರಿ ತನಿಖೆ ಮುಂದುವರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಟುಂಬಸ್ಥರು ಹಾಗೂ ಸ್ನೇಹಿತರು, ಬಾಲಕ ಮಾನಸಿಕ ಚಿಕಿತ್ಸಾಲಯದಲ್ಲಿದ್ದಾನೆ ಎಂದು ತಾವು ಭಾವಿಸಿದ್ದಾಗಿ ತಿಳಿಸಿದ್ದಾರೆ. ಇನ್ನು ಶಾಲಾ ಶಿಕ್ಷಕರಿಗೆ ಆತ ಬೇರೆ ಶಾಲೆಗೆ ವರ್ಗಾವಣೆಗೊಂಡಿದ್ದಾನೆ ಎಂದು ಸುಳ್ಳು ಹೇಳಲಾಗಿತ್ತು. ಪ್ರಕರಣದ ಸೂಕ್ಷ್ಮತೆ ಅರಿತು ಸಂತ್ರಸ್ತ ಬಾಲಕ ಹಾಗೂ ಆತನ ಕುಟುಂಬದ ಸದಸ್ಯರ ಹೆಸರುಗಳನ್ನು ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದಾರೆ.