ನವದೆಹಲಿ: ದೇಶದಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮಹತ್ವದ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋಲುಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಹಿಳಾ ಮೀಸಲಾತಿ (Women’s Quota Bill) ಅನುಷ್ಠಾನದ ವಿಚಾರ ಹಾಗೂ ಶುಕ್ರವಾರ ಮಂಡನೆಯಾಗಿದ್ದ ಸಂವಿಧಾನದ ‘131ನೇ ತಿದ್ದುಪಡಿ ಮಸೂದೆ’ಯ ವಿರುದ್ಧ ವಿರೋಧ ಪಕ್ಷಗಳು ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಉಂಟಾದ ಬೆಳವಣಿಗೆಗಳ ಕುರಿತು ಪ್ರಧಾನಿ ಮೋದಿ ಅವರು ಇಂದಿನ ತಮ್ಮ ಭಾಷಣದಲ್ಲಿ ದೇಶದ ಜನರೊಂದಿಗೆ ಚರ್ಚಿಸುವ ನಿರೀಕ್ಷೆಯಿದೆ.
ಮಸೂದೆಯ ಪ್ರಮುಖ ಉದ್ದೇಶವೇನಿತ್ತು?
2029ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಉದ್ದೇಶದಿಂದ ಈ ಮಸೂದೆ ಮಂಡಿಸಲಾಗಿತ್ತು. 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಸೀಮಾ ನಿರ್ಣಯ (ಕ್ಷೇತ್ರ ವಿಂಗಡಣೆ) ಮಾಡಿ, ಲೋಕಸಭಾ ಸ್ಥಾನಗಳನ್ನು ಪ್ರಸ್ತುತ ಇರುವ 543 ರಿಂದ 816 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಇದು ಹೊಂದಿತ್ತು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಸಮರ್ಪಕವಾಗಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಸ್ಥಾನಗಳನ್ನು ಕೂಡ ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಪ್ರತಿಪಾದಿಸಿತ್ತು.
ಮಸೂದೆಗೆ ಸೋಲಾಗಿದ್ದು ಹೇಗೆ?
ಸಂವಿಧಾನ ತಿದ್ದುಪಡಿಯ ಈ ನಿರ್ಣಾಯಕ ಮಸೂದೆಯನ್ನು ಅಂಗೀಕರಿಸಲು ಕಲಾಪದಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಗತ್ಯ ಬಹುಮತದ ಸಂಖ್ಯೆಯನ್ನು ಕಲೆಹಾಕಲು ಸಾಧ್ಯವಾಗಲಿಲ್ಲ.
ಶುಕ್ರವಾರ ರಾತ್ರಿ ಲೋಕಸಭೆಯಲ್ಲಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ ಕೇವಲ 298 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸಂಸದರು ಅದರ ವಿರುದ್ಧ ಮತ ಹಾಕಿದರು. ಅಂದು ಒಟ್ಟು ಮತ ಚಲಾಯಿಸಿದ 528 ಸದಸ್ಯರಲ್ಲಿ, ಮಸೂದೆ ಅಂಗೀಕಾರಕ್ಕೆ ಮೂರನೇ ಎರಡರಷ್ಟು ಅಂದರೆ 352 ಮತಗಳು ಬೇಕಾಗಿದ್ದವು. ಅಗತ್ಯ ಮತಗಳ ಕೊರತೆಯಿಂದಾಗಿ ಈ ಮಸೂದೆ ಅಂಗೀಕಾರವಾಗದೆ ವಿಫಲವಾಯಿತು.
