ಚೆನ್ನೈ: ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ ಚೆನ್ನೈ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ, ತನಿಖೆಯ ನಂತರ ಇದು ಸುಳ್ಳು ಬೆದರಿಕೆ ಎಂದು ತಿಳಿದುಬಂದಿದ್ದು, ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.
ವರದಿಗಳ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬ ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದಿದ್ದನು. ಆ ವ್ಯಕ್ತಿ ಸ್ವಲ್ಪ ಹೊತ್ತಿನಲ್ಲೇ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಸಿದಾಗ ಪೊಲೀಸರು ಆಘಾತಕ್ಕೊಳಗಾದರು. ಎಚ್ಚೆತ್ತ ತೇನಂಪೇಟೆ ಪೊಲೀಸರು ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ (ಬಿಡಿಡಿಎಸ್) ಮತ್ತು ಭದ್ರತಾ ಸಿಬ್ಬಂದಿಯೊಂದಿಗೆ ತ್ರಿಷಾ ಅವರ ಮನೆಗೆ ತಲುಪಿದರು.
ನಟಿಯ ಮನೆಯ ಪ್ರತಿಯೊಂದು ಮೂಲೆಯನ್ನು ಪೊಲೀಸರು ಕೂಲಂಕಷವಾಗಿ ತಪಾಸಣೆ ನಡೆಸಿದರು. ಸುಮಾರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಅಂತಿಮವಾಗಿ ಇದು ಕೇವಲ ಒಂದು ‘ಹುಸಿ ಬಾಂಬ್ ಬೆದರಿಕೆ’ ಎಂದು ಪೊಲೀಸರು ದೃಢಪಡಿಸಿದರು.
ಸುಳ್ಳು ಮಾಹಿತಿ ನೀಡಿ ಸಾರ್ವಜನಿಕ ಶಾಂತಿಗೆ ಭಂಗ ತಂದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕರೆ ಬಂದ ಮೊಬೈಲ್ ಸಂಖ್ಯೆಯ ಮೂಲವನ್ನು ಪತ್ತೆಹಚ್ಚಲಾಗುತ್ತಿದ್ದು, ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ್, ವಿಜಯ್ ಮತ್ತು ಅಜಿತ್ ಕುಮಾರ್ ಅವರ ಮನೆಗಳಿಗೂ ಇಂತಹದೇ ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು. ಈಗ ಆ ಪಟ್ಟಿಗೆ ತ್ರಿಶಾ ಕೂಡ ಸೇರ್ಪಡೆಯಾಗಿದ್ದಾರೆ.
