ನವದೆಹಲಿ: ಮುಂಬೈ ಮೂಲದ ಏರ್ ಇಂಡಿಯಾ (Air India) ಕ್ಯಾಪ್ಟನ್ (ಪೈಲಟ್) ಒಬ್ಬರು ದಕ್ಷಿಣ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಐಷಾರಾಮಿ ಹೋಟೆಲ್‌ನ ಕೊಠಡಿಯಲ್ಲಿ ಶುಕ್ರವಾರ ಶ*ವವಾಗಿ ಪತ್ತೆಯಾಗಿದ್ದಾರೆ. ಶನಿವಾರ ಮುಂಜಾನೆ ವಿಮಾನ ಚಲಾಯಿಸಬೇಕಿದ್ದ 40 ವರ್ಷ ವಯಸ್ಸಿನ ಈ ಪೈಲಟ್, ಹಿಂದಿನ ದಿನವೇ ಅನುಮಾನಾಸ್ಪದ ರೀತಿಯಲ್ಲಿ ಸಾ*ವನ್ನಪ್ಪಿರುವುದು ತೀವ್ರ ಆಘಾತ ಮೂಡಿಸಿದೆ.
ಗುರುವಾರವಷ್ಟೇ ಹೋಟೆಲ್‌ಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಈ ಪೈಲಟ್‌ಗೆ ಅವರ ಸಹೋದರ ಶುಕ್ರವಾರ ಸಂಜೆ ಕರೆ ಮಾಡಿದ್ದಾರೆ. ಆದರೆ, ಸತತವಾಗಿ ಕರೆ ಮಾಡಿದರೂ ಅವರು ಫೋನ್ ಸ್ವೀಕರಿಸದ ಕಾರಣ ಆತಂಕಗೊಂಡ ಸಹೋದರ, ತಕ್ಷಣವೇ ಹೋಟೆಲ್ ಮ್ಯಾನೇಜರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಮ್ಯಾನೇಜರ್ ಹೋಗಿ ನೋಡಿದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಹೋಟೆಲ್‌ನ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಅದಾಗಲೇ ಮೃ*ತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು ಎಂದು ನೈಋತ್ಯ ದೆಹಲಿಯ ಡಿಸಿಪಿ ಅಮಿತ್ ಗೋಯೆಲ್ ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ವಸಂತ್ ಕುಂಜ್ ನಾರ್ತ್ ಪೊಲೀಸರು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 194 ರ ಅಡಿಯಲ್ಲಿ ವಿಚಾರಣಾ ಪ್ರಕ್ರಿಯೆಗಳನ್ನು (Inquest proceedings) ಆರಂಭಿಸಿದ್ದಾರೆ. ಸಾ*ವಿನ ನಿಖರ ಕಾರಣ ತಿಳಿಯಲು ಶನಿವಾರ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾ*ವಿಗೆ ಕಾರಣವೇನೆಂಬುದು ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೈಲಟ್ ದಿಢೀರ್ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಏರ್ ಇಂಡಿಯಾ ಸಂಸ್ಥೆ, “ಈ ಘಟನೆಯಿಂದ ನಮಗೆ ತೀವ್ರ ದುಃಖವಾಗಿದೆ. ಮೃತ ಪೈಲಟ್ ಕೆಲ ತಿಂಗಳ ಹಿಂದಷ್ಟೇ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಏರ್ ಇಂಡಿಯಾಗೆ ವರ್ಗಾವಣೆಯಾಗಿದ್ದರು. ಶನಿವಾರ ಮುಂಜಾನೆ ಅವರು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಈ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಾವು ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಿದ್ದೇವೆ” ಎಂದು ಸಂಸ್ಥೆಯ ವಕ್ತಾರರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
