S Shorts

ಚಲಿಸುವ ರೈಲಿನಿಂದ ಜಾರಿ ಬಾಗಿಲಿನಲ್ಲಿ ನೇತಾಡಿದ ಯುವಕ: ರಕ್ಷಿಸುವ ಬದಲು ವಿಡಿಯೋ ಮಾಡಿದ ಪ್ರಯಾಣಿಕರು, ಜಾಲತಾಣದಲ್ಲಿ ಆಕ್ರೋಶ

ಚಲಿಸುವ ರೈಲಿನಿಂದ ಜಾರಿ ಬಾಗಿಲಿನಲ್ಲಿ ನೇತಾಡಿದ ಯುವಕ: ರಕ್ಷಿಸುವ ಬದಲು ವಿಡಿಯೋ ಮಾಡಿದ ಪ್ರಯಾಣಿಕರು, ಜಾಲತಾಣದಲ್ಲಿ ಆಕ್ರೋಶ
Author: Sagaradventure
Posted By: Sagaradventure
Updated: Sep 15, 2026 | 3:45 PM

ಚಲಿಸುವ ರೈಲಿನಿಂದ ಕಾಲು ಜಾರಿ ಯುವಕನೊಬ್ಬ ಅಪಾಯಕಾರಿ ಸ್ಥಿತಿಯಲ್ಲಿ ಬಾಗಿಲಿನಲ್ಲಿ ನೇತಾಡುತ್ತಿದ್ದರೂ, ಸಹಪ್ರಯಾಣಿಕರು ಆತನನ್ನು ರಕ್ಷಿಸುವ ಬದಲು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವಲ್ಲಿ ಮಗ್ನರಾಗಿರುವ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ನೆಟ್ಟಿಗರು ಪ್ರಯಾಣಿಕರ ಈ ಅಮಾನವೀಯ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಚಲಿಸುತ್ತಿರುವ ರೈಲಿನ ಬಾಗಿಲಿನಿಂದ ಹೊರಭಾಗಕ್ಕೆ ನೇತಾಡುತ್ತಾ, ತನ್ನ ಪ್ರಾಣ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸುತ್ತಿರುವುದು ಕಂಡುಬಂದಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಹಲವು ಪ್ರಯಾಣಿಕರು ಆತನನ್ನು ಕೈಹಿಡಿದು ಮೇಲೆ ಎಳೆಯುವುದಾಗಲಿ ಅಥವಾ ತಕ್ಷಣವೇ ಎಮರ್ಜೆನ್ಸಿ ಚೈನ್ ಎಳೆದು ರೈಲು ನಿಲ್ಲಿಸುವ ಪ್ರಯತ್ನವನ್ನಾಗಲಿ ಮಾಡಿಲ್ಲ. ಬದಲಾಗಿ, ಕೆಳಗೆ ಬಾಗಿ ತಮ್ಮ ಮೊಬೈಲ್‌ಗಳಲ್ಲಿ ಈ ಭೀಕರ ದೃಶ್ಯವನ್ನು ಸೆರೆಹಿಡಿಯುವುದರಲ್ಲೇ ನಿರತರಾಗಿದ್ದರು. ಕನಿಷ್ಠ ಮಾನವೀಯತೆಯನ್ನೂ ಮೆರೆಯದ ಪ್ರಯಾಣಿಕರ ಈ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಘಟನೆ ನಿಖರವಾಗಿ ಯಾವ ರೈಲ್ವೆ ನಿಲ್ದಾಣದ ಬಳಿ ಮತ್ತು ಯಾವಾಗ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಪ್ರಾಣಾಪಾಯದಲ್ಲಿ ಸಿಲುಕಿದ್ದ ಆ ಯುವಕ ಕೊನೆಗೆ ವಿಪತ್ತಿನಿಂದ ಪಾರಾದನೇ ಅಥವಾ ಇಲ್ಲವೇ ಎಂಬ ಮಾಹಿತಿಯೂ ಇನ್ನೂ ತಿಳಿದುಬಂದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ‘ಮಾನವೀಯತೆ ಸತ್ತುಹೋಗಿದೆ’ ಎಂದು ಕಳವಳ ವ್ಯಕ್ತಪಡಿಸುತ್ತಿದ್ದು, ಮತ್ತೊಬ್ಬರು ಅಪಾಯದಲ್ಲಿದ್ದಾಗ ಸಹಾಯ ಮಾಡುವ ಬದಲು ಕೇವಲ ಸಾಮಾಜಿಕ ಜಾಲತಾಣಗಳ ಲೈಕ್ಸ್, ವೀವ್ಸ್‌ಗಾಗಿ ವಿಡಿಯೋ ಮಾಡುವುದನ್ನು ಖಂಡಿಸುತ್ತಿದ್ದಾರೆ.