ಜೆಕೆ ಟೈರ್ ಪ್ರಾಯೋಜಿತ ‘ಭಾರತೀಯ ರೇಸಿಂಗ್ ಉತ್ಸವ 2026’ (ಇಂಡಿಯನ್ ರೇಸಿಂಗ್ ಫೆಸ್ಟಿವಲ್) ಗೆ ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ಭರ್ಜರಿ ಚಾಲನೆ ದೊರೆತಿದ್ದು, ಎಫ್4 ಭಾರತೀಯ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನ ಸ್ಪರ್ಧೆಗಳು ಅತ್ಯಂತ ರೋಚಕವಾಗಿ ನಡೆದಿವೆ.
ಈ ಸ್ಪರ್ಧೆಯಲ್ಲಿ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಪರವಾಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯಾದ ಯುವ ಚಾಲಕ ಅರಿಸ್ ಕಿರಿಯಾಕೌ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ನಡೆದ ಮೂರು ಓಟಗಳಲ್ಲಿ ಎರಡು ಬಾರಿ ದ್ವಿತೀಯ ಸ್ಥಾನ ಹಾಗೂ ಮೂರನೇ ಓಟದಲ್ಲಿ ಭರ್ಜರಿ ಗೆಲುವು ಸಾಧಿಸಿದ ಅವರು, ಒಟ್ಟು 51 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಮೊದಲ ಓಟದಲ್ಲಿ ದಕ್ಷಿಣ ಆಫ್ರಿಕಾದ ಲುವಿವೆ ಸಂಬುದ್ಲಾ ಅವರು ಅದ್ಭುತ ಪ್ರದರ್ಶನ ನೀಡಿ ಗೆಲುವಿನ ನಗೆ ಬೀರಿದರು. ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಪರವಾಗಿ ಸ್ಪರ್ಧಿಸಿದ್ದ ಅವರು ಎಂಟನೇ ಸ್ಥಾನದಿಂದ ಓಟ ಆರಂಭಿಸಿ ಅಂತಿಮವಾಗಿ 31 ನಿಮಿಷ 05.808 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಈ ಓಟದಲ್ಲಿ ಅರಿಸ್ ಕಿರಿಯಾಕೌ ಎರಡನೇ ಸ್ಥಾನ ಪಡೆದರೆ, ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡದ 15 ವರ್ಷದ ಯುವ ಚಾಲಕ ಆರನ್ ಮೆಹ್ತಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಿಶೇಷವೆಂದರೆ, ಆರನ್ ಮೆಹ್ತಾ ಎಫ್4 ಭಾರತೀಯ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಮೊದಲ ಸ್ಥಾನದಿಂದ (ಪೋಲ್ ಪೊಸಿಷನ್) ಓಟ ಆರಂಭಿಸಿದ ಅತ್ಯಂತ ಕಿರಿಯ ಚಾಲಕ ಎಂಬ ಹೊಸ ದಾಖಲೆಯನ್ನು ಬರೆದಿದ್ದಾರೆ.
ಭಾನುವಾರ ನಡೆದ ಎರಡನೇ ಓಟದಲ್ಲಿ ಗೋವಾ ಏಸಸ್ ಜೆಎ ರೇಸಿಂಗ್ ತಂಡದ ಮತ್ತೋರ್ವ 15 ವರ್ಷದ ಚಾಲಕ ಆರ್ಯನ್ ನರೋಲಾ ಮಿಂಚಿನ ಓಟ ಪ್ರದರ್ಶಿಸಿದರು. ಮೊದಲ ಸ್ಥಾನದಿಂದಲೇ ಓಟ ಆರಂಭಿಸಿದ ಅವರು, 26 ಸುತ್ತುಗಳ ಕಾಲ ಅರಿಸ್ ಕಿರಿಯಾಕೌ ಅವರಿಂದ ಎದುರಾದ ತೀವ್ರ ಒತ್ತಡವನ್ನು ಮೆಟ್ಟಿಬಿದ್ದು ಕೇವಲ 0.624 ಸೆಕೆಂಡ್‌ಗಳ ಅಂತರದಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡರು. ಈ ಗೆಲುವಿನೊಂದಿಗೆ ಆರ್ಯನ್ ನರೋಲಾ, ಎಫ್4 ಇತಿಹಾಸದಲ್ಲಿ ಎರಡನೇ ಅತಿ ಕಿರಿಯ ಓಟದ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ಓಟದಲ್ಲಿ ಕೋಲ್ಕತ್ತಾದ ಸ್ವರ್ಣವ್ ದಾಸ್ ಮೂರನೇ ಸ್ಥಾನ ಪಡೆದುಕೊಂಡರು.
ಇನ್ನು ಮೂರನೇ ಓಟದಲ್ಲಿ ಸತತ ಮೂರನೇ ಬಾರಿಗೆ ಮೊದಲ ಸ್ಥಾನದಿಂದಲೇ ಓಟ ಆರಂಭಿಸಿದ ಅರಿಸ್ ಕಿರಿಯಾಕೌ, ಎದುರಾಳಿ ಮಾಲ್ಹೋರಿ ಮಬುಂಡಾ (ಗಾಡ್‌ಸ್ಪೀಡ್ ಕೊಚ್ಚಿ) ಅವರ ತೀವ್ರ ಪೈಪೋಟಿಯ ನಡುವೆಯೂ 28 ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿ ಪ್ರಥಮ ಸ್ಥಾನ ಪಡೆದರು. ಮಬುಂಡಾ ಎರಡನೇ ಸ್ಥಾನ ಪಡೆದರೆ, ಕೊನೆಯ ಸುತ್ತಿನಲ್ಲಿ ಎದುರಾದ ಹಳದಿ ಧ್ವಜದ ಲಾಭ ಪಡೆದ ಆರನ್ ಮೆಹ್ತಾ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರು.
ಒಟ್ಟಾರೆಯಾಗಿ ಮೊದಲ ಸುತ್ತಿನ ಅಂತ್ಯಕ್ಕೆ ಅರಿಸ್ ಕಿರಿಯಾಕೌ 51 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಲುವಿವೆ ಸಂಬುದ್ಲಾ 38 ಅಂಕಗಳೊಂದಿಗೆ ಎರಡನೇ ಹಾಗೂ ಆರನ್ ಮೆಹ್ತಾ 32 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚಾಂಪಿಯನ್‌ಶಿಪ್‌ನ ಎರಡನೇ ಸುತ್ತಿನ ಪಂದ್ಯಾವಳಿಗಳು ಕೂಡ ಇದೇ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿವೆ.
