ಬೆಂಗಳೂರು: ನಗರದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯು ಮಾಲಿನ್ಯವು ನಿರಂತರವಾಗಿ ರಸ್ತೆ ಬದಿ ಹಾಗೂ ದಟ್ಟಣೆಯಲ್ಲಿ ಕರ್ತವ್ಯ ನಿರ್ವಹಿಸುವ ಮುಂಚೂಣಿ ಕಾರ್ಮಿಕರ (Frontline workers) ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ. ನಗರದಲ್ಲಿ 11,000ಕ್ಕೂ ಅಧಿಕ ಮುಂಚೂಣಿ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಈ ಆಘಾತಕಾರಿ ಅಂಶಗಳು ಬಯಲಾಗಿವೆ.
ಶ್ವಾಸಕೋಶ ದೌರ್ಬಲ್ಯ, ಯುವಕರಲ್ಲಿ ಹೃದಯಾಘಾತ:
ಮಾಲಿನ್ಯ ಮತ್ತು ಧೂಳಿನಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ‘ವಾಯು’ (VAAYU) ಕ್ಲಿನಿಕ್ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಶೇ. 45ರಷ್ಟು ಪೌರಕಾರ್ಮಿಕರು ಮತ್ತು ಶೇ. 29.5ರಷ್ಟು ಬಿಎಂಟಿಸಿ ಸಿಬ್ಬಂದಿ ಉಸಿರಾಟ ಹಾಗೂ ಶ್ವಾಸಕೋಶದ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ವಾಹನಗಳ ಹೊಗೆಯ ನಡುವೆಯೇ ನಿರಂತರವಾಗಿ ಕೆಲಸ ಮಾಡುವ ಶೇ. 28ರಷ್ಟು ಸಂಚಾರ ಪೊಲೀಸರು ಹಾಗೂ ಶೇ. 15ರಷ್ಟು ನಿರ್ಮಾಣ ಕಾರ್ಮಿಕರು ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿದ್ದಾರೆ. ಕಳಪೆ ಗಾಳಿಯ ಗುಣಮಟ್ಟದಿಂದಾಗಿ ಯುವಜನರಲ್ಲಿಯೂ ಹೃದಯಾಘಾತ ಹಾಗೂ ಪಾರ್ಶ್ವವಾಯು ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಹಾಗೂ ಡಾ. ವಿವೇಕ್ ಜಾವಳಿ ಕಳವಳ ವ್ಯಕ್ತಪಡಿಸಿದ್ದಾರೆ.
ತಜ್ಞರ ಸಲಹೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳು:
ರಸ್ತೆ ಬದಿಯ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ತಜ್ಞರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಗರಿಷ್ಠ ವಾಹನ ದಟ್ಟಣೆ ಹಾಗೂ ಮಾಲಿನ್ಯವಿರುವ (ಪೀಕ್ ಅವರ್ಸ್) ಸಮಯದಲ್ಲಿ ಪೌರಕಾರ್ಮಿಕರ ಕೆಲಸದ ವೇಳೆಯನ್ನು ಮರುಹೊಂದಿಸಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ, ಎಲ್ಲಾ ಕಾರ್ಮಿಕರಿಗೂ ವಾರ್ಷಿಕ ಕಡ್ಡಾಯ ವೈದ್ಯಕೀಯ ತಪಾಸಣೆ ನಡೆಸಬೇಕು ಹಾಗೂ ಮಾಸ್ಕ್ನಂತಹ ಅಗತ್ಯ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
