ಬೆಂಗಳೂರು: ಕನ್ನಡ ಒಟಿಟಿ ಲೋಕದಲ್ಲಿ ಥ್ರಿಲ್ಲರ್ ಸರಣಿಯೊಂದು ಅಭೂತಪೂರ್ವ ದಾಖಲೆ ಬರೆದಿದೆ. ಜೀ5 (ZEE5) ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಬ್ಲಾಕ್‌ಬಸ್ಟರ್ ವೆಬ್ ಸರಣಿ ‘ಅಯ್ಯನ ಮನೆ 2’, ಡಿಜಿಟಲ್ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಬರೋಬ್ಬರಿ 100 ಮಿಲಿಯನ್ (10 ಕೋಟಿ) ವೀಕ್ಷಣೆ ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಮೂಲಕ ಕರ್ನಾಟಕದಾದ್ಯಂತ ಅಪಾರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ, ಗುಣಮಟ್ಟದ ಸ್ಥಳೀಯ ಕಂಟೆಂಟ್‌ಗೆ ಇರುವ ಪ್ರಚಂಡ ಬೇಡಿಕೆಯನ್ನು ಈ ಸರಣಿ ಮತ್ತೊಮ್ಮೆ ಸಾಬೀತುಪಡಿಸಿದೆ.
ತನ್ನ ರೋಚಕ ನಿರೂಪಣೆ, ಮೈನಡುಗಿಸುವಂತಹ ಸಸ್ಪೆನ್ಸ್ ಹಾಗೂ ಊಹೆಗೂ ನಿಲುಕದ ಟ್ವಿಸ್ಟ್‌ಗಳಿಂದ ಈ ಸರಣಿ ವೀಕ್ಷಕರನ್ನು ಆರಂಭದಿಂದಲೇ ಕಟ್ಟಿಹಾಕಿದೆ. ಕೇವಲ ಹಾರರ್ ಅಂಶಗಳಿಗೆ ಸೀಮಿತವಾಗದೆ, ಕೌಟುಂಬಿಕ ಭಾವನಾತ್ಮಕ ಸನ್ನಿವೇಶಗಳು ಮತ್ತು ನಿಗೂಢ ರೋಮಾಂಚನವನ್ನು ಸರಿಸಮಾನವಾಗಿ ಬೆರೆಸಿರುವುದು ಪ್ರೇಕ್ಷಕರನ್ನು ಗಾಢವಾಗಿ ಆಕರ್ಷಿಸಿದೆ.
ರಹಸ್ಯಗಳ ಗೂಡಾಗಿರುವ ಪುರಾತನ ಹಿರಿಯರ ಮನೆಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ವರ್ಷಗಳಿಂದ ಮುಚ್ಚಿಹೋಗಿದ್ದ ಸತ್ಯಗಳು ಮತ್ತು ಅಸಹಜ ಘಟನೆಗಳ ಸುತ್ತ ತೆರೆದುಕೊಳ್ಳುತ್ತದೆ. ವಿಚಿತ್ರ ಕನಸುಗಳ ನಡುವೆ ಭಯವನ್ನು ಮೆಟ್ಟಿನಿಂತು, ನಾಗಲಾಂಬಿಕೆಯ ಸಾವಿನ ಹಿಂದಿನ ರಹಸ್ಯವನ್ನು ಬಯಲಿಗೆಳೆಯಲು ಹೋರಾಡುವ ‘ಪೂರ್ಣಿ’ಯ ಪಾತ್ರ ಇಡೀ ಸರಣಿಗೆ ಜೀವ ತುಂಬಿದ್ದು, ನೋಡುಗರಿಗೆ ವಿಶಿಷ್ಟ ಅನುಭವವನ್ನು ನೀಡಿದೆ.
ಕಾರ್ಯಕ್ರಮದ ಈ ಅಭೂತಪೂರ್ವ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿರುವ ಜೀ ಕನ್ನಡ ಹಾಗೂ ಜೀ ಪವರ್ ಮುಖ್ಯ ವಾಹಿನಿ ಅಧಿಕಾರಿ ಮತ್ತು ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, ಹರ್ಷ ವ್ಯಕ್ತಪಡಿಸಿದ್ದಾರೆ. “‘ಅಯ್ಯನ ಮನೆ 2’ ಸರಣಿಯು 100 ಮಿಲಿಯನ್ ವೀಕ್ಷಣೆ ನಿಮಿಷಗಳ ಬೃಹತ್ ಮೈಲಿಗಲ್ಲನ್ನು ದಾಟಿರುವುದು ಮತ್ತು ಕರ್ನಾಟಕದ ಪ್ರೇಕ್ಷಕರಿಂದ ಈ ಮಟ್ಟದ ಅದ್ಭುತ ಪ್ರತಿಕ್ರಿಯೆ ಪಡೆದಿರುವುದು ನಮಗೆ ಹೆಮ್ಮೆ ತಂದಿದೆ.
ಜೀ5 ನಲ್ಲಿ ನಾವು ಸಾಂಸ್ಕೃತಿಕವಾಗಿ ಬೇರೂರಿರುವ, ಪ್ರಭಾವಿ ಹಾಗೂ ಆಕರ್ಷಕ ಸ್ಥಳೀಯ ಕಥೆಗಳನ್ನು ತಲುಪಿಸಲು ಬದ್ಧರಾಗಿದ್ದೇವೆ. ಈ ಯಶಸ್ಸು ಕನ್ನಡ ಕಂಟೆಂಟ್ ಬೆಳವಣಿಗೆಗೆ ಹಾಗೂ ಮನಮುಟ್ಟುವ ಕಥೆಗಳನ್ನು ನೀಡುವ ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವಾಗಿದೆ” ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಈ ಜನಪ್ರಿಯ ಸರಣಿಯು ಜೀ5 ಒಟಿಟಿ ವೇದಿಕೆಯಲ್ಲಿ ವೀಕ್ಷಣೆಗೆ ಲಭ್ಯವಿದೆ.
