ಮುಂಬೈ: ವಿಮಾನ ಪ್ರಯಾಣದ ವೇಳೆ ಊಟದ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸಲು ಖ್ಯಾತ ವಿಮಾನಯಾನ ಸಂಸ್ಥೆ ಆಕಾಶ ಏರ್ (Akasa Air), ತನ್ನ ‘ಕೆಫೆ ಆಕಾಶ’ದ ಅಡಿಯಲ್ಲಿ ಪರಿಷ್ಕೃತ ಹಾಗೂ ವಿಶಿಷ್ಟವಾದ ಹೊಸ ಊಟದ ಮೆನುವನ್ನು ಪರಿಚಯಿಸಿದೆ. ಇಂದಿನ ಪ್ರಯಾಣಿಕರ ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ ದೇಶಿ ಸ್ವಾದ ಮತ್ತು ಜಾಗತಿಕ ಶೈಲಿಯ ತಿನಿಸುಗಳನ್ನು ಈ ಮೆನುವಿನಲ್ಲಿ ಅಳವಡಿಸಲಾಗಿದೆ. ಆಕಾಶ ಏರ್ ಸಂಸ್ಥೆ ಆರಂಭವಾದ ನಂತರ ಪರಿಚಯಿಸುತ್ತಿರುವ ನಾಲ್ಕನೇ ಮೆನು ಇದಾಗಿದೆ.
ಕರಾವಳಿ ಸ್ವಾದ ಹಾಗೂ ಜಾಗತಿಕ ತಿನಿಸುಗಳ ಸಂಗಮ:
ಹೊಸ ಮೆನುವಿನಲ್ಲಿ ವಿಶೇಷವಾಗಿ ಕರ್ನಾಟಕದ ಕರಾವಳಿಯ ಜನಪ್ರಿಯ ‘ಚಿಕನ್ ಪುಳಿಮುಂಚಿ’ಯ ರುಚಿಯನ್ನು ಜಾಗತಿಕ ಸುಶಿ ಶೈಲಿಯಲ್ಲಿ ಬೆರೆಸಿ ‘ಚಿಕನ್ ಪುಳಿಮುಂಚಿ ಸುಶಿ’ಯಾಗಿ ನೀಡಲಾಗುತ್ತಿದೆ. ಇದರೊಂದಿಗೆ ಪ್ರೋಟೀನ್ ಭರಿತ ವಿಯೆಟ್ನಾಮೀಸ್ ಚಿಕನ್ ಸಲಾಡ್, ಮ್ಯಾಂಗೋ ಆಚಾರಿ ರುಚಿಯೊಂದಿಗೆ ಗ್ರಿಲ್ಡ್ ಚಿಕನ್ ಸ್ಟೀಕ್ ಹಾಗೂ ಏಷ್ಯನ್ ಚಿಕನ್ ಸ್ಯಾಂಡ್‌ವಿಚ್‌ಗಳನ್ನು ಪ್ರಯಾಣಿಕರು ಸವಿಯಬಹುದಾಗಿದೆ.
ಸಸ್ಯಾಹಾರಿ, ಪಾನೀಯ ಹಾಗೂ ಮಕ್ಕಳ ವಿಶೇಷ:
ಸಸ್ಯಾಹಾರಿಗಳಿಗೆ ಮತ್ತು ಜೈನ ಶೈಲಿಯ ಊಟ ಇಷ್ಟಪಡುವವರಿಗಾಗಿ ತಾಜಾ ತರಕಾರಿಗಳನ್ನೊಳಗೊಂಡ ‘ತಂದೂರಿ ಸೋಯಾ ರ್‍ಯಾಪ್’ ಪರಿಚಯಿಸಲಾಗಿದೆ. ವಿಮಾನದಲ್ಲಿ ಪ್ರಯಾಣಿಸುವ ಮಕ್ಕಳಿಗಾಗಿಯೇ ‘ಕಿಡ್ಸ್ ಸ್ಕೈ ಟ್ರೀಟ್ಸ್’ ಕಾಂಬೋ ಲಭ್ಯವಿದೆ. ಊಟದ ಜೊತೆಗೆ ಕೊಲಂಬಿಯನ್ ಬ್ರೂ ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ, ಸಕ್ಕರೆ ರಹಿತ ಕಾಫಿ ಹಾಗೂ ಹಿಮಾಲಯದ ಬೆರ್ರಿ ಹಣ್ಣಿನಿಂದ ತಯಾರಿಸಿದ ‘ಪೆಪ್ಪಿಂಗ್ ಸೀ ಬಕ್‌ಥಾರ್ನ್’ನಂತಹ ವಿಶಿಷ್ಟ ಪಾನೀಯಗಳನ್ನು ಸೇರಿಸಲಾಗಿದೆ.
ಭಾರತೀಯ ಮತ್ತು ಜಾಗತಿಕ ಶೈಲಿಯ, ಆರೋಗ್ಯಕರ ಹಾಗೂ ಪ್ರೋಟೀನ್-ಭರಿತ ಆಹಾರಗಳನ್ನು ಪ್ರಯಾಣಿಕರಿಗೆ ನೀಡುವುದೇ ನಮ್ಮ ಪ್ರಮುಖ ಗುರಿ ಎಂದು ಆಕಾಶ ಏರ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ನಾರಾಯಣ್ ಟಿ.ವಿ. ತಿಳಿಸಿದ್ದಾರೆ.
ಪರಿಸರ ಸ್ನೇಹಿ ಪ್ಯಾಕೇಜಿಂಗ್:
ಪರಿಸರ ಕಾಳಜಿಗೂ ಸಂಸ್ಥೆ ಒತ್ತು ನೀಡಿದ್ದು, ಆಹಾರ ಪೂರೈಸಲು ಸಂಪೂರ್ಣವಾಗಿ ಮರುಬಳಕೆ ಮಾಡಬಹುದಾದ ಹಾಗೂ ರಾಸಾಯನಿಕ ಮುಕ್ತ ಕಾಗದದ ಪ್ಯಾಕೇಜಿಂಗ್ ಬಳಸಲಾಗುತ್ತಿದೆ. ಪ್ಲಾಸ್ಟಿಕ್ ಬದಲು ನೈಸರ್ಗಿಕವಾಗಿ ಕರಗುವ ಮರದ ಚಮಚಗಳನ್ನು ನೀಡಲಾಗುತ್ತದೆ. ಪ್ರಯಾಣಿಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಥವಾ ಟ್ರಾವೆಲ್ ಏಜೆಂಟ್‌ಗಳ ಮೂಲಕ ಮುಂಚಿತವಾಗಿ ಈ ಊಟವನ್ನು ಕಾಯ್ದಿರಿಸಬಹುದು.
