ಬೆಂಗಳೂರು: ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆ ‘ಆಕಾಸ ಏರ್’ (Akasa Air) ತನ್ನ ಸೇವೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದ್ದು, ಪ್ರತಿದಿನ 200ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸುವ ಮೂಲಕ ವಿಮಾನಯಾನ ವಲಯದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೊಸ ಮಾರ್ಗಗಳು ಹಾಗೂ ಉತ್ತಮ ಸಂಪರ್ಕವನ್ನು ಸಂಸ್ಥೆ ಒದಗಿಸುತ್ತಿದೆ.
ಬೆಂಗಳೂರಿನಿಂದ ಅಂತಾರಾಷ್ಟ್ರೀಯ ಸೇವೆ ವಿಸ್ತರಣೆ:
ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತದ ಪ್ರಯಾಣಿಕರಿಗೆ ಹೆಚ್ಚಿನ ಆದ್ಯತೆ ನೀಡಿರುವ ಆಕಾಸ ಏರ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತನ್ನ ಕಾರ್ಯಾಚರಣೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಬೆಂಗಳೂರಿನಿಂದಲೇ ದೇಶದ 19 ವಿವಿಧ ನಗರಗಳಿಗೆ ಹಾಗೂ ಅಬುಧಾಬಿ, ಫುಕೆಟ್ ಮತ್ತು ಜೆದ್ದಾ ಸೇರಿ ಮೂರು ಪ್ರಮುಖ ಅಂತಾರಾಷ್ಟ್ರೀಯ ತಾಣಗಳಿಗೆ ನೇರ ವಿಮಾನ ಸೌಲಭ್ಯ ಒದಗಿಸುತ್ತಿದೆ. ಚಂಡೀಗಢ, ಜೈಪುರ ಮತ್ತು ಉದಯಪುರಕ್ಕೂ ನೇರ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ಕೇರಳದ ಕೊಚ್ಚಿ ಮತ್ತು ಕೋಳಿಕ್ಕೋಡ್ನಿಂದಲೂ ಸೇವೆಗಳನ್ನು ಹೆಚ್ಚಿಸಿ ದಕ್ಷಿಣ ಭಾರತದಲ್ಲಿ ಸಂಸ್ಥೆ ತನ್ನ ಬೇರನ್ನು ಗಟ್ಟಿಗೊಳಿಸಿದೆ.
ಪ್ರಮುಖ ನಗರಗಳ ಸಂಪರ್ಕ ಹಾಗೂ ಗ್ರಾಹಕ ಸ್ನೇಹಿ ಸೇವೆ:
ಉತ್ತರ ಭಾರತದಲ್ಲಿ ದೆಹಲಿಯಿಂದ ವಾರಕ್ಕೆ 196 ವಿಮಾನಗಳು (14 ನಗರಗಳಿಗೆ) ಹಾಗೂ ಪೂರ್ವ ಭಾರತದಲ್ಲಿ ಕೋಲ್ಕತ್ತಾದಿಂದ 95 ವಿಮಾನಗಳು ಹಾರಾಟ ನಡೆಸುತ್ತಿವೆ. ಮುಂಬೈ-ದೆಹಲಿ, ನವಿ ಮುಂಬೈ-ದೆಹಲಿ ಹಾಗೂ ದೆಹಲಿ-ಕೋಲ್ಕತ್ತಾ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಿಸಲಾಗಿದೆ. “ಕೇವಲ ವಿಮಾನಗಳ ಸಂಖ್ಯೆ ಹೆಚ್ಚಿಸುವುದಷ್ಟೇ ಅಲ್ಲ, ಪ್ರಯಾಣಿಕರಿಗೆ ಉತ್ತಮ ಸಮಯ, ಹೆಚ್ಚಿನ ಆಯ್ಕೆ ಹಾಗೂ ವಿಶ್ವಾಸಾರ್ಹ ಅನುಭವ ನೀಡುವುದು ನಮ್ಮ ಗುರಿ” ಎಂದು ಆಕಾಸ ಏರ್ನ ಸಹ-ಸಂಸ್ಥಾಪಕ ಹಾಗೂ ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್ ಸ್ಪಷ್ಟಪಡಿಸಿದ್ದಾರೆ.
ಪರಿಸರ ಸ್ನೇಹಿ ವಿಮಾನ ಹಾಗೂ ಭವಿಷ್ಯದ ಯೋಜನೆ:
ಆಗಸ್ಟ್ 2022ರಲ್ಲಿ ಕಾರ್ಯಾಚರಣೆ ಆರಂಭಿಸಿದ ಆಕಾಸ ಏರ್, ತನ್ನ ಸಮಯಪಾಲನೆಯಿಂದಾಗಿ ಇದುವರೆಗೆ 3 ಕೋಟಿಗೂ ಅಧಿಕ ಪ್ರಯಾಣಿಕರ ವಿಶ್ವಾಸ ಗಳಿಸಿದೆ. ಪ್ರಸ್ತುತ ಭಾರತದ 31 ನಗರಗಳಿಗೆ ಮತ್ತು 7 ಅಂತಾರಾಷ್ಟ್ರೀಯ ತಾಣಗಳಿಗೆ ಹಾರಾಟ ನಡೆಸುತ್ತಿದೆ. ಭವಿಷ್ಯದ ವಿಸ್ತರಣೆಗಾಗಿ 226 ಅತ್ಯಾಧುನಿಕ, ಕಡಿಮೆ ಇಂಧನ ಬಳಸುವ ಪರಿಸರ ಸ್ನೇಹಿ ‘ಬೋಯಿಂಗ್ 737 ಮ್ಯಾಕ್ಸ್’ (Boeing 737 MAX) ವಿಮಾನಗಳಿಗೆ ಆರ್ಡರ್ ನೀಡಲಾಗಿದ್ದು, ಸದ್ಯ 43 ವಿಮಾನಗಳು ಬಳಕೆಯಲ್ಲಿವೆ.
